ಗ್ರಾಪಂ ಬ್ಯಾಂಕ್ ಖಾತೆಯಲ್ಲಿ ಅಕ್ರಮ ಆರೋಪ

ಕೋಳಾರ, ಅಲಿಯಾಬಾದ್, ಅಮಲಾಪೂರ ಗ್ರಾ.ಪಂ.ನಲ್ಲಿ ಅಕ್ರಮ, ತನಿಖೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ
Eshwar Khandre | ಸಚಿವ ಈಶ್ವರ್ ಖಂಡ್ರೆ
Eshwar Khandre | ಸಚಿವ ಈಶ್ವರ್ ಖಂಡ್ರೆ
Published on: 

ಬೆಂಗಳೂರು: ಗ್ರಾಮ ಪಂಚಾಯಿತಿ ಬ್ಯಾಂಕ್ ಖಾತೆಗಳ ದುರುಪಯೋಗದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಯಾಗಿ ಇಲ್ಲವೇ ನಗರಸಭೆ, ನಗರ ಪಾಲಿಕೆಯಲ್ಲಿ ಸೇರ್ಪಡೆಯಾಗಿ ಸಂಪೂರ್ಣ ಹಸ್ತಾಂತರವಾದ ಬಳಿಕವೂ ಗ್ರಾ.ಪಂ. ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಇಲಾಖೆಯ ಕಾರ್ಯದರ್ಶಿಗೆ ಸಚಿವರು ಲಿಖಿತ ಆದೇಶ ಹೊರಡಿಸಿದ್ದಾರೆ.

ಬ್ಯಾಂಕ್ ಖಾತೆಸಹಿತ ಕೆಲವು ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಆದ ಬಳಿಕವೂ ಕೆಲವು ಪಂಚಾಯಿತಿಗಳಲ್ಲಿ ಅಧಿಕೃತ ಮಾದರಿ ಸಹಿ ಮತ್ತು ಸೀಲು ಬಳಸಿ ಬ್ಯಾಂಕ್ ಖಾತೆಯ ವಹಿವಾಟು ನಡೆದಿದೆ. ಕೆಲವು ಪ್ರಕರಣಗಳಲ್ಲಿ ಗ್ರಾಮ ಪಂಚಾಯಿತಿಯ ಅಧೀನದಲ್ಲಿದ್ದ ಕೆಲವು ಗ್ರಾಮಗಳು ಮಾತ್ರವೇ ನಗರಸಭೆ, ನಗರ ಪಾಲಿಕೆಗೆ ಹಸ್ತಾಂತರವಾಗಿದ್ದು, ಹಸ್ತಾಂತರಿತ ಗ್ರಾಮಗಳಲ್ಲಿ ಪಂಚಾಯಿತಿ ವತಿಯಿಂದ ಕೈಗೊಂಡಿದ್ದ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಪಂಚಾಯಿತಿಯೇ ಹಣ ಭರಿಸುವಂತಾಗಿರುವ ಮಾಹಿತಿ ಬಂದಿದೆ. ಹಸ್ತಾಂತರ ಆಗಿರುವ ಗ್ರಾಪಂಗಳ ಬ್ಯಾಂಕ್ ಖಾತೆಗಳಲ್ಲಿ ಅಕ್ರಮವಾಗಿ ವಹಿವಾಟು ನಡೆದಿದೆಯೇ ಮತ್ತು ಕಾಮಗಾರಿಗೆ ಗ್ರಾಪಂ ವತಿಯಿಂದ ಹಣ ಭರಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಒಂದು ಸಮಿತಿ ರಚಿಸಿ, ವರದಿಯನ್ನು 30 ದಿನಗಳ ಒಳಗಾಗಿ ಕಡತದಲ್ಲಿ ಸಲ್ಲಿಸಲು ಸೂಚನೆ ನೀಡಿದ್ದಾರೆ.

ಬೀದರ್ ನಗರ ಪಾಲಿಕೆಗೆ ಸಂಪೂರ್ಣ ಹಸ್ತಾಂತರವಾದ ತರುವಾಯ ಬೀದರ್ ಜಿಲ್ಲಾ ಪಂಚಾಯಿತಿ ಅಧೀನದಲ್ಲಿದ್ದ ಕೋಳಾರ, ಅಲಿಯಾಬಾದ್ ಮತ್ತು ಅಮಲಾಪೂರ ಗ್ರಾಮ ಪಂಚಾಯಿತಿಗಳ ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆದು ಹಣ ವೆಚ್ಚವಾಗಿರುವ ಬಗ್ಗೆಯೂ ತನಿಖೆಗೆ ಸಚಿವರು ಆದೇಶಿಸಿದ್ದಾರೆ. ಇದರಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮತ್ತು ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆಯಿದ್ದು, ಹಸ್ತಾಂತರಗೊಂಡ ಬ್ಯಾಂಕ್ ಖಾತೆಗಳ ವಹಿವಾಟು ನಡೆಯಲು ಹೇಗೆ ಸಾಧ್ಯ. ಇದಕ್ಕೆ ಅಧಿಕೃತ ಆದೇಶಗಳಿತ್ತೆ ಅಥವಾ ಅಧಿಕೃತ ಮಾದರಿ ಸಹಿ ಮತ್ತು ಕಚೇರಿಯ ಸೀಲುಗಳ ದುರ್ಬಳಕೆ ಆಗಿದೆಯೇ ಎಂಬ ಬಗ್ಗೆ ತನಿಖೆ ಮಾಡಿ ನೈಜತೆಯನ್ನು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಲ್ಲಿ ಸಂಬಂಧಿತ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net