ಬಡವರಿಗೆ ಕೈಗೆಟುಕುವ ದರದಲ್ಲಿ ಸಾಲಸೌಲಭ್ಯ ಅಗತ್ಯ

creditfacilities
creditfacilities
Published on

ಪ್ರಮುಖ ಮುಖ್ಯಾಂಶಗಳು

  • ಹಣಕಾಸು ಇಲಾಖೆಯ ಕಾರ್ಯದರ್ಶಿ ಡಾ. ವಿಶಾಲ್ ಹೇಳಿಕೆ
  • ರಾಜ್ಯದ ಕಿರುಬಂಡವಾಳ ವಲಯವು ಕೋಟಿಗೂ ಅಧಿಕ ಖಾತೆ
ಬೆಂಗಳೂರು: ಬಡವರು ಸುಸ್ಥಿರ ಮತ್ತು ಗೌರವಯುತ ಜೀವನ ನಡೆಸಲು ಅವರಿಗೆ ಕೈಗೆಟುಕುವ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕಿದೆ ಎಂದು ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿ (ಹಣಕಾಸು ಸುಧಾರಣೆ) ಡಾ. ವಿಶಾಲ್ ಆರ್. ಅಭಿಪ್ರಾಯಪಟ್ಟಿದ್ದಾರೆ.
ಅಸೋಷಿಯೇಷನ್ ಆಫ್​ ಕರ್ನಾಟಕ ಮೈಕ್ರೋಫೈನಾನ್ಸ್ ಇನ್‌ಸ್ಟಿಟ್ಯೂಷನ್ಸ್ (ಎಕೆಎಂಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣಕಾಸಿನ ಸೌಲಭ್ಯದಿಂದ ವಂಚಿತರಾದ ಜನರಿಗೆ ಕಿರುಹಣಕಾಸು ಸಂಸ್ಥೆಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ. ಮುಂದಿನ 30-40 ವರ್ಷಗಳಲ್ಲಿ ನಾವು ಇದನ್ನು ಬೇರೆಯದೇ ಹಂತಕ್ಕೆ ಕೊಂಡೊಯ್ಯಬೇಕಿದೆ. ಮುಖ್ಯವಾಗಿ ಬಡವರಿಗೆ ಸಾಲಸೌಲಭ್ಯ ಒದಗಿಸಬೇಕಿದೆ ಎಂದರು.
ರಾಜ್ಯದಲ್ಲಿ ಕಿರುಹಣಕಾಸು ಕ್ಷೇತ್ರವು ಹೇಗೆ ವಿಕಸನಗೊಳ್ಳುತ್ತಿದೆ ಎಂಬುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಇತ್ತೀಚೆಗೆ ನಾವು ಜಾರಿಗೆ ತಂದ ‘ಎಂಎಫ್‌ಐ ಕಾಯ್ದೆ’ಯ ಪ್ರಕ್ರಿಯೆಯಲ್ಲೂ ನಾನು ತೊಡಗಿಸಿಕೊಂಡಿದ್ದೆ. ಸಾಲಸೌಲಭ್ಯದಿಂದ ಸಮಾಜಕ್ಕೆ ಒಳಿತಾಗಬೇಕು, ಸಾಲಗಾರರಿಗೆ ಹಿತಕರವಾಗಿರಬೇಕು, ಕಿರುಹಣಕಾಸು ಸಂಸ್ಥೆಗಳಿಗೆ ಪೂರಕವಾಗಿರಬೇಕು ಹಾಗೂ ಸರ್ಕಾರಕ್ಕೂ ಸಹಕಾರಿಯಾಗಿರಬೇಕು ಎಂದು ಅವರು ಪ್ರತಿಪಾದಿಸಿದರು.
ಸರ್ಕಾರಿ ಸಂಸ್ಥೆಗಳ ಹೊರತಾಗಿ, ನೀವೇ ಸ್ವತಃ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಯಾವುದೇ ರೀತಿಯ ದುರುಪಯೋಗವನ್ನು ತಡೆಯುವುದು ಯಾವಾಗಲೂ ಉತ್ತಮ. ಸಾಲಗಾರರಿಂದಾಗಲಿ, ಸಾಲ ನೀಡುವವರಿಂದಾಗಲಿ ಅಥವಾ ಸರ್ಕಾರಿ ಸಂಸ್ಥೆಗಳಿಂದಾಗಲಿ ಯಾವುದೇ ಅನ್ಯಾಯ ನಡೆಯದಂತೆ ನೋಡಿಕೊಳ್ಳಬೇಕು ಎಂದು ಡಾ. ವಿಶಾಲ್ ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಕೋಟಿಗೂ ಅಧಿಕ ಖಾತೆ:

ಕರ್ನಾಟಕದ ಕಿರುಬಂಡವಾಳ ವಲಯವು ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದಿದೆ. ಪ್ರಸ್ತುತ ರಾಜ್ಯದಲ್ಲಿ 1,07,79,050 ಸಕ್ರಿಯ ಸಾಲ ಖಾತೆಗಳನ್ನು ಹೊಂದಿದ್ದು, ಸುಮಾರು 57,989.57 ಕೋಟಿ ರೂ. ಬಾಕಿ ಇರುವ ಬಂಡವಾಳದೊಂದಿಗೆ ಕಿರುಬಂಡವಾಳ ಉದ್ಯಮಕ್ಕೆ ಆಸರೆಯಾಗಿದೆ ಎಂದು ಅಂಕಿ-ಅಂಶ ಬಿಡುಗಡೆ ಮಾಡಿದ ಎಕೆಎಂಐ ಪದಾಧಿಕಾರಿಗಳು ಪ್ರಕಟಿಸಿದರು.
ಪ್ರಸ್ತುತ ಬೆಳಗಾವಿ, ಮೈಸೂರು, ಬೆಂಗಳೂರು, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ಖಾತೆಗಳ ಸಂಖ್ಯೆಯನ್ನು ಹೊಂದುವಲ್ಲಿ ಮುಂದಿವೆ. ಆದರೆ, ಬಂಡವಾಳದ ಗಾತ್ರದ ವಿಷಯದಲ್ಲಿ ಬೆಂಗಳೂರು (ಗ್ರಾಮೀಣ ಮತ್ತು ನಗರ), ಬೆಳಗಾವಿ, ಮೈಸೂರು, ತುಮಕೂರು ಮತ್ತು ಮಂಡ್ಯ ಮುನ್ನಡೆ ಸಾಧಿಸಿವೆ.
"

ನಮ್ಮ ಸದಸ್ಯ ಸಂಸ್ಥೆಗಳು ನಿರ್ಣಾಯಕ ಕ್ರಮಗಳ ಮೂಲಕ ಒಳಗೊಳ್ಳುವ ಆರ್ಥಿಕತೆಗೆ ಬದ್ಧತೆಯನ್ನು ಪ್ರದರ್ಶಿಸಿವೆ. ಅಪಪ್ರಚಾರಗಳನ್ನು ಮೀರಿ, ಕಿರು ಹಣಕಾಸು ಕ್ಷೇತ್ರದ ಬಲವಾದ ಅಡಿಪಾಯವನ್ನು ನಾವು ಮರುಸ್ಥಾಪಿಸಿದ್ದೇವೆ.

- ಎನ್.ವೆಂಕಟೇಶ್, ಎಕೆಎಂಐ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net