ಬಾಕಿ ವ್ಯಾಜ್ಯಗಳ ವಿಲೇವಾರಿಗೆ ಹೆಚ್ಚುವರಿ ಎ.ಸಿ.ಗಳು

 ಕೃಷ್ಣಬೈರೇಗೌಡ- ಕಂದಾಯ ಸಚಿವರು
ಕೃಷ್ಣಬೈರೇಗೌಡ- ಕಂದಾಯ ಸಚಿವರು
Published on

ಪ್ರಮುಖ ಮುಖ್ಯಾಂಶಗಳು

  • ಕಂದಾಯ ಸಚಿವರ ಉಪಕ್ರಮ
  • ಬೆಂಗಳೂರು ನಗರ, ಬೆಂ. ಗ್ರಾಮಾಂತರ, ತುಮಕೂರು ಜಿಲ್ಲೆಗೆ ನೇಮಕ
  • ಇರುವ ಉಪ ವಿಭಾಗಾಧಿಕಾರಿಗಳ ಜತೆಗೆ ಹೆಚ್ಚುವರಿ ಎ.ಸಿ.ಗಳ ನಿಯೋಜನೆ
ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಐದಾರು ವರ್ಷಗಳಿಂದ ಬಾಕಿ ಇರುವ ವ್ಯಾಜ್ಯಗಳ ವಿಲೇವಾರಿಗೆ ಕಂದಾಯ ಇಲಾಖೆ ಮಾಸ್ಟರ್‌ಪ್ಲಾನ್ ಮಾಡಿದೆ. ನಿರ್ದಿಷ್ಟ ಸಮಯದಲ್ಲಿ ವಿಲೇವಾರಿ ಮಾಡಲು ಹೆಚ್ಚುವರಿ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ತುಮಕೂರು ಜಿಲ್ಲೆ ಸೇರಿ ರಾಜ್ಯದ ಹಲವು ಕಡೆದ ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯದಲ್ಲಿ ಅತಿಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಆದ್ದರಿಂದ ಪ್ರಸ್ತುತ ಇರುವ ಉಪ ವಿಭಾಗಾಧಿಕಾರಿ ವೃಂದದ ಸಮನಾಂತರ ವೃಂದದ ಇತರೆ ವಿಶೇಷ ಎ.ಸಿ.ಗಳನ್ನು ನೇಮಕ ಮಾಡಿ ಕಾರ್ಯ ಹಂಚಿಕೆ ಮಾಡಿ ಕಂದಾಯ ಇಲಾಖೆ ನಿರ್ಧರಿಸಿದೆ. ಇತ್ತೀಚೆಗೆ ಕಂದಾಯ ಇಲಾಖೆಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಅರೆ ನ್ಯಾಯಿಕ ಪ್ರಕರಣಗಳ ವಿಲೇವಾರಿಯು ಮಂದಗತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಿ ವೇಗವಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸುವ ಸಲುವಾಗಿ ಉಪ ವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ.
ಕಂದಾಯ ನ್ಯಾಯಾಲಯಗಳಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 136(2)ರಡಿ ದಾಖಲಾಗಿ ಬಾಕಿ ಇರುವ ಮೇಲ್ಮನವಿ ಪ್ರಕರಣಗಳನ್ನು ಭೂಕಂದಾಯ ನಿಯಮಗಳು, 1966ರ ನಿಯಮ 43(3) ಮತ್ತು 69ರಲ್ಲಿ ಅಧಿಕಾರ ಅನ್ವಯ ವಿಲೇವಾರಿ ಮಾಡಲು ಕಾರ್ಯ ಹಂಚಿಕೆ ಮಾಡಲಾಗಿದೆ. ಈ ಹಿಂದಿನ 2025ರ ಸೆ. 25, 10 ಮತ್ತು ಜು. 15ರಂತೆ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಉತ್ತರ ವಿಭಾಗಕ್ಕೆ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಉಪಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆ.ಬಿ. ಮಾರುತಿ ಅವರನ್ನು ನೇಮಕ ಮಾಡಿದ್ದು, ವರ್ಷದೊಳಗಿನ ಪ್ರಕರಣಗಳ ವಿಲೇವಾರಿ ಜವಾಬ್ದಾರಿ ನೀಡಲಾಗಿದೆ. ಅದೇ ರೀತಿ, ಕೈಗಾರಿಕಾ ತರಬೇತಿ ನಿರ್ದೇಶಕ ಎಸ್.ಎನ್. ಚಿದಾನಂದ ಅವರಿಗೆ ಒಂದು ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಐದು ವರ್ಷದೊಳಗಿನ ಬಾಕಿ ಪ್ರಕರಣಗಳ ವಿಲೇಗೆ ಸೂಚಿಸಲಾಗಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಜೆ. ಚಂದ್ರಶೇಖರಯ್ಯಗೆ ಐದು ವರ್ಷಕ್ಕಿಂತ ಮೇಲ್ಪಟ್ಟ ಬಾಕಿ ಪ್ರಕರಣಗಳ ವಿಚಾರಣೆ ಮಾಡಿ ಇತ್ಯಾರ್ಥ ಮಾಡುವ ಅಧಿಕಾರ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮತ್ತು ಹೊಸಕೋಟೆ ಉಪ ವಿಭಾಗಕ್ಕೆ ಬಿಡಿಎ ಎಸ್ಟೇಟ್ ಅಧಿಕಾರಿ ಪ್ರೀತಮ್ ನಸಲಾಪುರ ಅವರನ್ನು ಎ.ಸಿ.ಯಾಗಿ ನೇಮಿಸಲಾಗಿದೆ. ಇವರಿಗೆ ವರ್ಷದೊಳಗಿನ ಪ್ರಕರಣ ನೀಡಲಾಗಿದೆ. ಆಹಾರ ಇಲಾಖೆ ಅಪರ ಆಯುಕ್ತೆ ಹರಿಶಿಲ್ಪಾ ಅವರನ್ನು ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ವರ್ಷಕ್ಕಿಂತ ಮೇಲ್ಪಟ್ಟ ಮತ್ತು 5 ವರ್ಷ ಒಳಗಿನ ಪ್ರಕರಣಗಳ ವಿಲೇವಾರಿಗೆ ತಿಳಿಸಲಾಗಿದೆ. ಇನ್ನೂ ರಾಜ್ಯ ಉಗ್ರಾಣ ನಿಗಮ ಕಾರ್ಯದರ್ಶಿ ಎಸ್.ಎಂ. ಶಿವಕುಮಾರ್‌ಗೆ 5ವರ್ಷಕ್ಕಿಂತ ಮೇಲ್ಪಟ್ಟ ಬಾಕಿ ಪ್ರಕರಣಗಳ ಇತ್ಯಾರ್ಥದ ಜವಾಬ್ದಾರಿ ನೀಡಲಾಗಿದೆ.
ತುಮಕೂರು ಜಿಲ್ಲೆಯ ತುಮಕೂರು ಉಪ ವಿಭಾಗಕ್ಕೆ ಎಸ್‌ಎಲ್‌ಎಓ ಧರ್ಮಪಾಲ್ ಅವರನ್ನು ಎಸಿಯಾಗಿ ನೇಮಿಸಿ 3 ವರ್ಷ ಮೇಲ್ಪಟ್ಟ 4 ವರ್ಷ ಒಳಗಿನ ಬಾಕಿ ಪ್ರಕರಣಗಳ ವಿಲೇವಾರಿಗೆ ಮತ್ತು ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯ ಎಸ್‌ಎಲ್‌ಎಓ ಸುಪ್ರೀಯಾ ಬಣಕಾರ್ ಅವರಿಗೆ 4 ವರ್ಷ ಮೇಲ್ಪಟ್ಟ ಮತ್ತು 5 ವರ್ಷದೊಳಗಿನ ಪ್ರಕರಣಗಳ ವಿಲೇವಾರಿಗೆ ಸೂಚಿಸಲಾಗಿದೆ.
ಹೆಚ್ಚುವರಿ ಎ.ಸಿ.ಗಳ ನೇಮಕಾತಿಯ ಅನುಕೂಲಗಳು
* ಐದಾರು ವರ್ಷದಿಂದ ಬಾಕಿ ಇರುವ ವ್ಯಾಜ್ಯಗಳು ಶೀಘ್ರ ವಿಲೇವಾರಿ
* ಅನಗತ್ಯವಾಗಿ ನ್ಯಾಯಾಲಯಕ್ಕೆ ಜನರು ಅಲೆಯುವುದನ್ನು ತಪ್ಪಿಸುವುದು
* ಎ.ಸಿ. ಕೋರ್ಟ್ ವ್ಯಾಪ್ತಿಗೆ ಬಾರದೆ ಇರುವ ಪ್ರಕರಣಗಳ ಪತ್ತೆಹಚ್ಚಿ ಇತ್ಯರ್ಥ
* ವ್ಯಾಪ್ತಿ ಮೀರಿ ಅನಗತ್ಯವಾಗಿ ಎ.ಸಿ. ಕೋರ್ಟ್‌ನಲ್ಲಿ ಅರ್ಜಿ ಹೂಡಿಕೆಗೆ ಬ್ರೇಕ್
* ಭ್ರಷ್ಟಾಚಾರಕ್ಕೆ ಕಡಿವಾಣ, ಪಾರದರ್ಶಕತೆ ತರಲು ನಿರ್ಧಾರ
* ಅಧಿಕಾರ ಮೀರಿ ಎ.ಸಿ.ಗಳು ಆದೇಶ ನೀಡುವುದಕ್ಕೆ ಕಡಿವಾಣ ಹಾಕಲು ನಿರ್ಧಾರ
"

ಉಪ ವಿಭಾಗ ಕಂದಾಯ ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳ ಶೀಘ್ರ ವಿಲೇವಾರಿ ಮತ್ತು ಪಾರದರ್ಶಕತೆ, ನ್ಯಾಯಸಮ್ಮತ ಸೇವೆ ನೀಡುವ ಸಲುವಾಗಿ ಹೆಚ್ಚುವರಿ ಎಸಿಗಳನ್ನು ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net