

ಬೆಂಗಳೂರು: ಯುವ ಮನಸ್ಸುಗಳನ್ನು ಗೆಲ್ಲಲು ಮತ್ತು ಪ್ರಸ್ತುತ ಇರುವ ಗೊಂದಲಗಳ ನಿವಾರಣೆ ಮಾಡುವ ಸಲುವಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಘಟಕ(ಬಿಜೆವೈಎಂ) ಜೆನ್‌ಜೀಗಳೊಂದಿಗೆ ಸಂವಾದಕ್ಕೆ ವೇದಿಕೆ ಸಜ್ಜು ಮಾಡಿದೆ. ‘ವಿಕಸಿತ ಭಾರತ-ಯುವ ಭಾರತ’ ಎಂಬ ಧ್ಯೇಯದೊಂದಿಗೆ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ನೆರೆಟಿವ್ ಸರಿಗಟ್ಟಲು ಮುಂದಾಗಿದೆ.
ಮೊದಲು ಮಹಾನಗರಗಳಾದ ಬೆಂಗಳೂರು ನಗರ, ದಾವಣಗೆರೆ ಮತ್ತು ಬೆಳಗಾವಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ವೃತ್ತಿಪರ ಯುವ ಉದ್ಯೋಗಿಗಳೊಂದಿಗೆ ವಿಕಸಿತ ಭಾರತ, ಯುವ ಭಾರತ ಸಂವಾದ ಆಯೋಜಿಸುತ್ತಿದ್ದು, ದೀಪಾವಳಿಗೂ ಮೊದಲೇ ನಡೆಯಲಿವೆ. ಇದಾದ ಮೇಲೆ ಪ್ರತಿಯೊಂದು ಜಿಲ್ಲೆಯಲ್ಲ್ಲೂ ತಲಾ ಮೂರು ಕಾಲೇಜುಗಳಲ್ಲಿ ಜೆನ್‌ಜೀಗಳೊಂದಿಗೆ ಸಂವಾದ ಆಯೋಜನೆಗೆ ನಿರ್ಧಾರ ಮಾಡಲಾಗಿದೆ. ಇದು ವೇದಿಕೆ ಕಾರ್ಯಕ್ರಮ ಆಗಿರುವುದಿಲ್ಲ. ಕೇವಲ ಸಂವಾದ ಆಗಿದ್ದು, ಬಿಜೆಪಿ ಮತ್ತು ಯುವ ಮೋರ್ಚಾ ವೇದಿಕೆ ಹಿಂದೆ ಕೆಲಸ ಮಾಡಲಿದೆ. ಇದಲ್ಲದೆ, ವೈದ್ಯರು, ಲೆಕ್ಕಪರಿಶೋಧಕರು, ಇಂಜಿನಿಯರ್‌ಗಳು, ವಕೀಲರು ಸೇರಿ ವೃತ್ತಿಪರ ಯುವ ಉದ್ಯೋಗಿಗಳೊಂದಿಗೂ ಸಂವಾದ ನಡೆಯಲಿದೆ. ಈ ಮೂಲಕ 100 ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಗುರಿಯನ್ನು ಮೋರ್ಚಾ ಹೊಂದಿದೆ.
ಜೆನ್‌ಜೀಗಳ ಸಂವಾದದಲ್ಲಿ ಬಿಜೆಪಿ ನಾಯಕರು ಭಾಗವಹಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಅವರ ಬದಲಿಗೆ ವಿಜ್ಞಾನಿಗಳು, ಉಪನ್ಯಾಸಕರು, ವೃತ್ತಿಪರ ಸಂಘಟನೆಗಳ ಅಧ್ಯಕ್ಷರು ಅಥವಾ ಪ್ರಮುಖರಿಗೆ ಜವಾಬ್ದಾರಿ ನೀಡಲಾಗುತ್ತದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಮಹತ್ವ, ಹಕ್ಕುಗಳು, ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ. ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಜತೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಂವಾದ ನಡೆಯಲಿದೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಸಲುವಾಗಿ ಕೈಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ, ಬಾಹ್ಯಾಕಾಶ ಕ್ಷೇತ್ರದ ಆವಿಷ್ಕಾರಗಳು, ರಕ್ಷಣಾ ವಿಭಾಗದಲ್ಲಿ ಆಗಿರುವ ಸುಧಾರಣೆಗಳ ಬಗ್ಗೆ ಜೆನ್‌ಜೀಗಳಲ್ಲಿ ಅರಿವು ಮೂಡಿಸುವ ಜತೆಗೆ ಅವರಲ್ಲಿನ ಪ್ರಶ್ನೆಗಳಿಗೆ ಉತ್ತರ ನೀಡುವುದು ಬಿಜೆಪಿಯ ಪ್ರಮುಖ ಉದ್ದೇಶವಾಗಿದೆ.
ಪ್ರಜಾಪ್ರಭುತ್ವ ಅಭಿಯಾನ ದೇಶವ್ಯಾಪಿ ಬಿಜೆಪಿ ಕೈಗೊಂಡಿರುವ ಪ್ರಜಾಪ್ರಭುತ್ವ ಅಭಿಯಾನವನ್ನು ಕರ್ನಾಟಕದಲ್ಲಿಯೂ ನಡೆಸಲು ರಾಜ್ಯ ನಾಯಕರು ತಯಾರಿ ನಡೆಸಿದ್ದಾರೆ. ನ.3, 4 ಮತ್ತು 5ಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಹರೀಶ್ ದ್ವಿವೇದಿ ಇಲ್ಲಿಯೇ ಇರಲಿದ್ದಾರೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು, ಪಕ್ಷದ ಮುಖಂಡರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ 2028ರ ವಿಧಾನಸಭಾ ಚುನಾವಣೆಗೆ ಚಾಲನೆ ನೀಡಲಿದೆ.