ಕೊಲೆಗೆ ಯತ್ನಿಸಿದ್ದ 11 ಜನರ ಬಂಧನ

ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ, ಕ್ರಿಕೆಟ್ ಆಡುವಾಗ ನಡೆದಿದ್ದ ಗಲಾಟೆ
accused
accused
Published on: 

ಬೆಂಗಳೂರು : ಕ್ರಿಕೆಟ್ ಆಡುವಾಗ ನಡೆದಿದ್ದ ಗಲಾಟೆಯನ್ನೇ ದ್ವೇಷವಾಗಿಟ್ಟುಕೊಂಡು ವ್ಯಕ್ತಿಯೊಬ್ಬನ ಕೊಲ್ಲಲು ಯತ್ನಿಸಿದ್ದ 11 ಆರೋಪಿಗಳನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿಯ ವಿ. ಪ್ರೇಮ್ (19), ಬೇಂದ್ರೆನಗರದ ಜಿ. ಮಣಿಕಂಠ (27), ಗೌಡನಪಾಳ್ಯದ ಜಿ. ಮನೋಜ್, ಕೃಷ್ಣಗುಪ್ತ (19), ಆಕಾಶ್ (23), ಮುನ್ನಾ (29), ಮಧುಸೂದನ್ (24), ಎಸ್. ದರ್ಶನ್ (23), ಎಂ.ಎನ್. ಸುದೀಪ್ (25), ಎಂ.ಜಿ. ಭರತ್ (22), ಕೀರ್ತನಾ ಮಣಿಕಂಠ (21) ಬಂಧಿತರು.

ಎರಡು ತಿಂಗಳ ಹಿಂದೆ ಪ್ರೇಮ್ ಮತ್ತಿತರರು ಕ್ರಿಕೆಟ್ ಆಡುವಾಗ ಇವರ ವಿರುದ್ಧ ಆಡುತ್ತಿದ್ದ ತಂಡ ಗಲಾಟೆ ಮಾಡಿತ್ತು. ಬ್ಯಾಟ್, ವಿಕೆಟ್‌ನಿಂದ ಹಲ್ಲೆ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿರಲಿಲ್ಲ. ಇದೇ ದ್ವೇಷದ ಹಿನ್ನೆಲೆ ಪ್ರೇಮ್ ಸಹಚರರು ಸ್ಯಾಂಡಿ ಎಂಬಾತನನ್ನು ಕೊಲ್ಲಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೆ.20ರಂದು ಆರೋಪಿಗಳು ಮೂರು ಬೈಕ್‌ನಲ್ಲಿ ಬಂದು ಉತ್ತರಹಳ್ಳಿಯ ಮಾರಮ್ಮ ದೇಗುಲ ರಸ್ತೆಯಲ್ಲಿ ನಿಂತಿದ್ದ ಅಮಾಯಕ ಯುವಕರ ಮೇಲೆ ಮಾರಕಾಸದಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಅಲ್ಲಿಂದ ಅರೆಹಳ್ಳಿ ಆರ್ಚ್ ಬಳಿ ಇರುವ ಮೀನಂಗಡಿಗೆ ಬಂದ ಆರೋಪಿಗಳು, ಮೀನೂಟ ಮಾಡುತ್ತಿದ್ದ ಇಬ್ಬರ ಮೇಲೆ ಮಚ್ಚು, ರಾಡ್‌ನಿಂದ ಹಲ್ಲೆ ಮಾಡಿದ್ದರು. ಈ ಸಂಬಂಧ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಬ್ಬ ಮಹಿಳೆಯೂ ಬಂಧನ

ಕೊಲೆ ಯತ್ನ ಪ್ರಕರಣದಲ್ಲಿ ಬೇಂದ್ರೆನಗರದ ಕೀರ್ತನಾ (21) ಎಂಬಾಕೆ ಬಂಧಿತಳಾಗಿದ್ದಾಳೆ. ಈಕೆ 2ನೇ ಆರೋಪಿ ಮಣಿಕಂಠನ ಪತ್ನಿಯಾಗಿದ್ದಾಳೆ. ಆರೋಪಿಗಳು ನಾಪತ್ತೆಯಾಗಲು ಈಕೆ ಸಹಾಯ ಮಾಡಿದ್ದಲ್ಲದೆ, ಅವರಿಗೆ ಹಣಕಾಸಿನ ನೆರವು ಮಾಡಿದ್ದಳು ಎಂಬುದು ಖಾಕಿ ತನಿಖೆಯಲ್ಲಿ ಗೊತ್ತಾಗಿದೆ.

ಸಾರ್ವಜನಿಕರ ಮೇಲೆ ಹಲ್ಲೆ..!

ಕೊಲೆ ಮಾಡಬೇಕಿದ್ದ ವ್ಯಕ್ತಿಯನ್ನು ಹುಡುಕುವ ಭರದಲ್ಲಿ ಆರೋಪಿಗಳು ಸಾರ್ವಜನಿಕರ ಮೇಲೆ ಮಾರಕಾಸದಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಒಂದು ಸ್ಥಳದಲ್ಲಿ ಉತ್ತರಹಳ್ಳಿಯ ಕಿರಣ್ ಕುಮಾರ್ ಎಂಬುವರು ಮತ್ತೊಂದು ಸ್ಥಳದಲ್ಲಿ ಬಾಲಸುಬ್ರಮಣ್ಯ, ರವಿನಂದನ್ ಮೇಲೆ ಹಲ್ಲೆ ಮಾಡಲಾಗಿತ್ತು. ರವಿನಂದನ್‌ನು ಸ್ಯಾಂಡಿಯ ಸ್ನೇಹಿತನಾಗಿದ್ದನು ಎಂದು ಮೂಲಗಳಿಂದ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net