

ಬೆಂಗಳೂರು: ಅನೇಕ ವಿಚಾರಗಳಲ್ಲಿ ದಾಖಲೆಗಳನ್ನು ಬರೆಯುತ್ತಾ ಬಂದಿರುವ ಬೆಂಗಳೂರು ಇದೀಗ ಮತ್ತೊಂದು ವಿಚಾರದಲ್ಲಿ ದಾಖಲೆ ಬರೆದಿದೆ.
ಬೆಂಗಳೂರಿನ ಬಹು ದೊಡ್ಡ ಸಮಸ್ಯೆಯೆನಿಸಿಕೊಂಡಿರುವ ಟ್ರಾಫಿಕ್ ದಾಖಲೆಯನ್ನು ಬರೆದಿದೆ. ಈ ಮೂಲಕ 2019ರಲ್ಲಿ ಪ್ರಪಂಚದಲ್ಲೇ ಅತೀ ಹೆಚ್ಚು ಟ್ರಾಫಿಕ್ ಸಮಸ್ಯೆಯನ್ನು ಬೆಂಗಳೂರು ಅನುಭವಿಸಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಟಾಮ್ ಟಾಮ್ ಸಂಸ್ಥೆಯು 2019ರಲ್ಲಿ ಪ್ರಪಂಚದ ಒಟ್ಟು 57 ಪ್ರಮುಖ ದೇಶಗಳ 416 ನಗರಗಳಲ್ಲಿ ಸಮೀಕ್ಷೆಯನ್ನು ನಡೆಸಿದ್ದು, ಯಾವ ಯಾವ ನಗರಗಳಲ್ಲಿ ಹೆಚ್ಚಿನ ಟ್ರಾಫಿಕ್ ಸಮಸ್ಯೆ ಉಂಟಾಗಿದೆ ಎನ್ನುವುದನ್ನು ವರದಿ ಮಾಡಿದೆ. ಈ ವರದಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ದೊರಕಿದ್ದರೆ ಮುಂಬೈಗೆ ನಾಲ್ಕನೇ ಸ್ಥಾನ, ಪುಣೆಗೆ ಐದನೇ ಸ್ಥಾನ ಮತ್ತು ದೆಹಲಿಗೆ 8ನೇ ಸ್ಥಾನ ಲಭಿಸಿದೆ. ಟಾಪ್ 10 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳು ಭಾರತದ ನಗರಗಳ ಪಾಲಾಗಿದ್ದು, ಭಾರತದಲ್ಲಿರುವ ಟ್ರಾಫಿಕ್ ಸಮಸ್ಯೆಯನ್ನು ಎತ್ತಿ ಹಿಡಿದಂತಾಗಿದೆ.
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪ್ರತಿ ಮನುಷ್ಯ 2019ರಲ್ಲಿ 243 ಕ್ಕೂ ಹೆಚ್ಚು ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಕಳೆದಿದ್ದಾನೆ. ಎಂದರೆ ಸರಿಸುಮಾರು 10 ದಿನ, 3 ಗಂಟೆ ಟ್ರಾಫಿಕ್ನಲ್ಲೇ ಇದ್ದಂತೆ. ನಾಲ್ಕನೇ ಸ್ಥಾನದಲ್ಲಿರುವ ಮುಂಬೈನಲ್ಲಿ ಕಳೆದ ವರ್ಷ ಪ್ರತಿಯೊಬ್ಬರು ಸರಿ ಸುಮಾರು 209 ಗಂಟೆಗಳ ಕಾಲ (8 ದಿನ, 17 ಗಂಟೆ) ಟ್ರಾಫಿಕ್ನಲ್ಲಿ ಕಳೆದಿದ್ದಾರೆ. ಪುಣೆಯಲ್ಲಿ 193 ಗಂಟೆಗಳು ವರದಿಯಾಗಿದ್ದರೆ, ದೆಹಲಿ ನಗರ ವಾಸಿಗರು 190 ಗಂಟೆ ಟ್ರಾಫಿಕ್ನಲ್ಲಿದ್ದಿರುವುದಾಗಿ ವರದಿಯಾಗಿದೆ. 2018ಕ್ಕೆ ಹೋಲಿಸಿದರೆ ದೆಹಲಿಯಲ್ಲಿ 2019ರಲ್ಲಿ ಟ್ರಾಫಿಕ್ನ ಸಮಸ್ಯೆ ಶೇ.2 ಕಡಿಮೆಯಾಗಿದೆ ಎಂದು ಹೇಳಲಾಗಿದೆ.
2018ಕ್ಕೆ ಹೋಲಿಕೆ ಮಾಡಿದರೆ 2019ರಲ್ಲಿ ಬಹುತೇಕ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ ಎನ್ನುವುದು ವರದಿಯಿಂದ ತಿಳಿದುಬಂದಿದೆ. ಕೇವಲ 63 ನಗರಗಳಲ್ಲಿ ಮಾತ್ರ ಸಮಸ್ಯೆ ಸ್ವಲ್ಪ ಮಟ್ಟಿಗೆ ಸುಧಾರಣೆಗೊಂಡಿದೆ