

ಬೆಂಗಳೂರು: ಸೂಪರ್ ಮಾರ್ಕೆಟ್ಗಳನ್ನು ತೆರೆಯಬೇಕೋ, ಬೇಡವೋ ಎಂಬ ವಿಚಾರವಾಗಿ 24 ಗಂಟೆಯಲ್ಲಿ ಹೊರಡಿಸಿದ ವಿಭಿನ್ನ ಆದೇಶ ಬಿಬಿಎಂಪಿ ಆಡಳಿತ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯ ಕೊರತೆ ಇರುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಒಂದೇ ವಿಚಾರಕ್ಕೆ ವಿಭಿನ್ನ ಆದೇಶ ಬರುತ್ತಿರುವುದು ಸಾರ್ವ ಜನಿಕರು ಹಾಗೂ ಕೆಳಹಂತದ ಅಧಿಕಾರಿಗಳಿಗೆ ಕಿರಿಕಿರಿ ತರಿಸುತ್ತಿದೆ. ಭಾನುವಾರ (ಮಾ.15) ಪಾಲಿಕೆ ಆಯುಕ್ತರು ಸಾರ್ವಜನಿಕ ಹಿತದೃಷ್ಟಿ ಯಿಂದ ದಿನಬಳಕೆ ವಸ್ತುಗಳ ಲಭ್ಯತೆಗೆ ಸೂಪರ್ ಮಾರ್ಕೆಟ್ ತೆರೆಯುವಂತೆ ಆದೇಶಿಸಿದ್ದರು. ಆದರೆ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು ಸುದ್ದಿಗೋಷ್ಠಿ ನಡೆಸಿ, ಹವಾನಿಯಂತ್ರಿತ ಸೂಪರ್ ಮಾರ್ಕೆಟ್ಗಳನ್ನು ಬಂದ್ ಮಾಡಬೇಕು ಎಂದು ಆದೇಶಿಸಿದ್ದರು.
ದಿನಬಳಕೆ ವಸ್ತು ಖರೀದಿಗೆ ತೊಂದರೆ ಆಗಬಾರದೆಂದು ಸೂಪರ್ ಮಾರ್ಕೆಟ್ ತೆರೆಯುವಂತೆ ಸಿಎಂ ಕೂಡ ಸೂಚಿಸಿದ್ದರು. ಅದು ಅರಿವಿಗೆ ಬಂದ ಬಳಿಕ ತಮ್ಮ ಆದೇಶ ಹಿಂಪಡೆದಿರುವುದಾಗಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಹೇಳಿದ್ದಾರೆ.
ಕರಗ ವಿಚಾರದಲ್ಲೂ ವಿಭಿನ್ನ ಹೇಳಿಕೆ: ಕರಗ ಉತ್ಸವ ನಡೆಯುತ್ತದೆ ಎಂದು ಮೇಯರ್ ಹೇಳಿದ್ದರು. ಆದರೆ, ಪಾಲಿಕೆ ಆಯುಕ್ತರು ಕೊನೇ ದಿನದವರೆಗೂ ಸಮಯವಿದ್ದು, ಕರೊನಾ ಸೋಂಕು ನಿಯಂತ್ರಣಕ್ಕೆ ಬಂದರೆ ಮಾತ್ರ ಆಚರಿಸಲಾಗುವುದು ಎನ್ನುವ ಮೂಲಕ ಸಮನ್ವಯ ಕೊರತೆ ಬಹಿರಂಗ ಪಡಿಸಿದ್ದರು.
ಸೋಂಕಿತರ ಬಗ್ಗೆ ಜಿಐಎಸ್ ಮಾಹಿತಿ: ಕರೊನಾ ಸೋಂಕಿನಿಂದ ದೂರವಿರಲು ಸಾರ್ವಜನಿಕರಿಗೆ ಸೋಂಕಿತರ ಪ್ರದೇಶದ ಬಗ್ಗೆ ಜಿಯಾಗ್ರಾಫಿಕಲ್ ಇನ್ಪಮೇಶನ್ ಸಿಸ್ಟಂ (ಜಿಐಎಸ್) ಮೂಲಕ ಮಾಹಿತಿ ನೀಡಲಾಗುವುದು. 100 ಜನರ ಮಿತಿಗೊಳಪಟ್ಟು ಮದುವೆ ಮಾಡಿ. ಆದರೆ, ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಿ. ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಥವಾ ಕಾರ್ಯಾಗಾರ ಆಯೋಜಿಸಬಾರದು ಎಂದು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥರಾಜು ಕೋರಿದ್ದಾರೆ.