

ಬೆಂಗಳೂರು: ಎಲ್ಎಕ್ಸ್ಎಲ್ ಐಡಿಯಾಸ್, ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ ನಾಗಶೆಟ್ಟಿಹಳ್ಳಿಯ ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್ನಲ್ಲಿ ಗುರುವಾರ ಆಯೋಜನೆಗೊಂಡಿದ್ದ ಏಳನೇ ಆವೃತ್ತಿಯ 'ಸ್ಕೂಲ್ ಸಿನಿಮಾ ಇಂಟರ್ರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್'ಗೆ ಎಲ್ಎಕ್ಸ್ಎಲ್ ಐಡಿಯಾಸ್ ಸಂಸ್ಥಾಪಕ ಸೈಯದ್ ಸುಲ್ತಾನ್ ಅಹ್ಮದ್ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಆಗಸ್ಟ್ 31ರ ವರೆಗೆ ರಾಜ್ಯದ 300 ಶಾಲೆಗಳಲ್ಲಿ 80ಕ್ಕೂ ಹೆಚ್ಚಿನ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ವಿಶ್ವ ಎದುರಿಸುತ್ತಿರುವ ಸಮಕಾಲೀನ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತಹ ಸಿನಿಮಾಗಳನ್ನು ಆಯ್ಕೆ ಮಾಡಿ ಪ್ರದರ್ಶಿಸುತ್ತಿದ್ದೇವೆ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ತರಗತಿಯೊಳಗೇ ಕುಳಿತು ಎಲ್ಲವನ್ನೂ ಕಲಿಯುತ್ತೇನೆ ಎಂದರೆ ಸಾಧ್ಯವಿಲ್ಲ. ಪ್ರಪಂಚದ ಆಗುಹೋಗುಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ದೃಶ್ಯ ಮಾಧ್ಯಮದ ಮೂಲಕ ಸೂಕ್ಷ$್ಮ ವಿಚಾರಗಳನ್ನು ಸರಳವಾಗಿ ತಲುಪಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕದ 300ಕ್ಕೂ ಅಧಿಕ ಶಾಲೆಗಳಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಮಾನಸಿಕ ಆರೋಗ್ಯ, ಸಾಮಾಜಿಕ ನ್ಯಾಯ, ಪರಿಸರ ಜಾಗೃತಿ ಮತ್ತು ಭದ್ರತೆಯಂತಹ ವೈವಿಧ್ಯಮಯ ವಿಷಯಗಳ ಕುರಿತು ಚಲನಚಿತ್ರಗಳು ದೇಶದ 30ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಒಟ್ಟಾರೆಯಾಗಿ ಮಕ್ಕಳಲ್ಲಿ ಜಾಗೃತ ಭಾವ ಹಾಗೂ ವಿಮರ್ಷಾತ್ಮಕ ದೃಷ್ಟಿಕೋನ ಬೆಳೆಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.
ಸಾಮಾಜಿಕ ಪದ್ದತಿಗಳನ್ನು ಪ್ರಶ್ನಿಸುವ ಮಗಳು ಕ್ರೀಡಾ ಸಾಧನೆಗಾಗಿ ಹೋರಾಡುವ ಕಥಾಹಂದರದ 'ರಾಸ್ಮಲೈ', ತನ್ನ ಹಳ್ಳಿಯಿಂದ ಹೊರಡುವ ಮೊದಲು ಸಿಕ್ಕಿದ ಚಿರತೆಯನ್ನು ನೋಡಲು ಹಂಬಲಿಸುವ ಹುಡುಗನ ಕಥೆ ವಿವರಿಸುವ 'ಶೇರಾ', ಸಂವಹನ ಹಾಗೂ ಧೈರ್ಯದ ಬಗೆಗೆ ತಿಳಿಸಿಕೊಡುವ 'ವಿಂಟರ್ ಟೇಲ್ ಹೂಫ್ಸ್ ಆನ್ ಸ್ಕೇಟ್ಸ್' ಚಿತ್ರಗಳನ್ನು ವಿದ್ಯಾರ್ಥಿಗಳು ವೀಸಿದರು. 'ಬೆಸ್ಟ್ ಫ್ರೆಂಡ್ಸ್ ಫಾರೆವರ್' ಹಾಗೂ 'ಟೆ ಹಾರ್ಡ್' ಚಿತ್ರಗಳು ಪಾಲಕರರಿಗಾಗಿ ಪ್ರದರ್ಶನವಾಯಿತು.
ಲೆಫ್ಟಿನೆಂಟ್ ಜನರಲ್ ಬಿ.ಕೆ. ರೆಪ್ಸ್ವಾಲ್, ಬ್ರಿಗೇಡಿಯರ್ ರೋಹಿತ ಸೇಥಿ, ಎಫ್ಡಬ್ಲ್ಯೂಒ ಅಧ್ಯಕ್ಷೆ ಮಂಜು ಅಹ್ಲಾವತ್ ಸೇರಿದಂತೆ ಇತರರಿದ್ದರು.