ನಿರ್ಭಯಾ ನಿಧಿ ಅಕ್ರಮ ಆರೋಪದ ಬಗ್ಗೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್​ ಹೇಳಿದ್ದಿಷ್ಟು...

Nimablkar IPS
Published on

ಬೆಂಗಳೂರು: ನಿರ್ಭಯಾ ನಿಧಿಯ ಮಹಿಳಾ ಸುರಕ್ಷತಾ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮದ ಬಗ್ಗೆ ಐಪಿಎಸ್​ ಅಧಿಕಾರಿ ಡಿ.ರೂಪಾ ಆರೋಪ ಮಾಡಿದ ಬೆನ್ನಿಗೆ, ಆ ಪ್ರಕ್ರಿಯೆ ನಿರ್ವಹಿಸಿದ ಸಮಿತಿಯ ಅಧ್ಯಕ್ಷರಾಗಿರುವ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್​ ಇಂದು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ.

ಕಳೆದ ಎರಡು ಮೂರು‌ದಿನದಿಂದ ನಾವು ಸಾಮಾಜಿಕ‌ ಜಾಲತಾಣದಲ್ಲಿ ನಿರ್ಭಯಾ ನಿಧಿಯ ಮಹಿಳಾ ಸುರಕ್ಷತಾ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎಂಬ ಆರೋಪ ವ್ಯಾಪಕವಾಗಿ ಕಂಡುಬಂದಿದೆ. ಟೆಂಡರ್ ಇನ್ವೈಟ್ ಕಮಿಟಿ‌ ಚೇರ್ಮನ್ ಆಗಿ ನಿರ್ಭಯಾ ನಿಧಿ ಟೆಂಡರ್ ಪ್ರಕರಣ ಸಂಬಂಧ ಹರಿದಾಡುತ್ತಿರುವ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದು, ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್​ ಅನ್ನು ಅನರ್ಹಗೊಳಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಕಾಲ್ 1 ರಲ್ಲಿ ಈ ಕಂಪನಿ ಭಾಗವಹಿಸಿಯೇ ಇಲ್ಲ. ಕಾಲ್​ 1 ಟೆಂಡರ್ ಪ್ರಕ್ರಿಯೆ 2020ರ ಜನವರಿ 16ರಂದು ರದ್ದುಗೊಂಡಿದೆ. ಭಾಗವಹಿಸಿದ ಮೂರು ಕಂಪನಿಗಳು ನಿಗದಿತ ಮಾನದಂಡಕ್ಕೆ ಅನುಗುಣವಾಗಿ ಅರ್ಹತೆ ಹೊಂದಿರಲಿಲ್ಲ. ಕಾಲ್ 1ರ ಟೆಂಡರ್ ಪ್ರಕ್ರಿಯೆ ಟೆಕ್ನಿಕಲ್ ಮೌಲ್ಯಮಾಪನದ ತನಕ ತಲುಪಿಯೇ ಇಲ್ಲ.

ಇನ್ನು ಕಾಲ್ 2 ರ ಟೆಂಡರ್​ ಪಕ್ರಿಯೆ 2020ರ ಜೂನ್ 20ರಂದು ನಡೆದಿದ್ದು, ಎಲ್​ಆ್ಯಂಡ್​ಟಿ, ಮ್ಯಾಟ್ರಿಕ್ಸ್ ಸೆಕ್ಯೂರಿಟಿ ಆ್ಯಂಡ್ ಸರ್ವೈಲೆನ್ಸ್ ಪ್ರೈವೇಟ್ ಲಿಮಿಟೆಡ್, ಬಿಇಎಲ್​ ಕಂಪನಿಗಳ ಬಿಡ್ಡಿಂಗ್ ಸ್ವೀಕರಿಸಲ್ಪಟ್ಟಿದೆ. ಆದರೆ, ಚೀನೀ ಉತ್ಪನ್ನಗಳನ್ನ ನಿಷೇಧ ಕಾರಣ ಕರ್ನಾಟಕ ಸರ್ಕಾರದ ಆದೇಶ ಪ್ರಕಾರ 2020ರ ಜುಲೈ 16ರಂದು ಕಾಲ್ 2 ಟೆಂಡರ್ ಕೂಡ ರದ್ದಾಯಿತು. ಹೀಗಾಗಿ ಬಿಇಎಲ್ ಕಂಪನಿಯ ಬಿಡ್ಡಿಂಗ್ ತಿರಸ್ಕರಿಸಲ್ಪಟ್ಟಿದೆ ಎಂಬ ವಾದದಲ್ಲಿ ಹುರುಳಿಲ್ಲ. ಸದ್ಯ ಕಾಲ್ 3 ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸಂಪೂರ್ಣ ಪಾರದರ್ಶಕ ಮಾದರಿಯಲ್ಲೇ ಎಲ್ಲವೂ ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net