

ಬೆಂಗಳೂರು: ಉದ್ಯಾನನಗರಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಮದುವಣಗಿತ್ತಿಯಂತೆ ಸಜ್ಜಾಗಿದೆ!
ಎಂ.ಜಿ. ರಸ್ತೆ, ಬಿಗ್ರೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ, ಸದಾಶಿವನಗರ ಮುಂತಾದೆಡೆ ಪಬ್, ಬಾರ್ ಆಂಡ್ ರೆಸ್ಟೋರೆಂಟ್, ಪಂಚತಾರಾ ಹೋಟೆಲ್ ಮತ್ತು ಹಲವೆಡೆ ಆಯೋಜಕರು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋ ಬಸ್ತ್ ಏರ್ಪಡಿಸಿ ಪೊಲೀಸರು ಎಲ್ಲೆಡೆ ನಿಗಾ ವಹಿಸಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ, ನಮ್ಮ ಮೆಟ್ರೋ ಸೇವೆಯನ್ನು ತಡರಾತ್ರಿವರೆಗೂ ವಿಸ್ತರಿಸಲಾಗಿದೆ.
ಎಂ.ಜಿ. ರಸ್ತೆ. ಬ್ರಿಗೇಡ್, ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ದೀಪಾಲಂಕಾರ ಮಾಡಲಾಗಿದೆ. ಪಬ್, ಬಾರ್ ಆಂಡ್ ರೆಸ್ಟೋರೆಂಟ್, ಪಂಚತಾರಾ ಹೋಟೆಲ್ಗಳಲ್ಲಿ ಪ್ಯಾಕೇಜ್ ನಿಗದಿ ಮಾಡಿ ಆನ್ಲೈನ್ನಲ್ಲಿ ಟೆಕೆಟ್ ಮಾರಾಟ ಮಾಡಿವೆ. ಮದ್ಯ, ಊಟ, ಮ್ಯೂಸಿಕ್ ಜತೆಗೆ ಡಾನ್ಸ್ ಇರುವುದಾಗಿ ಜನರನ್ನು ಆಕರ್ಷಿಸಿವೆ. ಯುವ ಸಮೂಹ ವರ್ಷಾಚರಣೆಗೆ ಸಜ್ಜಾಗಿದೆ.
ಮಂಗಳವಾರ (ಡಿ.31) ಸಂಜೆ 4ರಿಂದ ಜ.1ರ ಬೆಳಗ್ಗೆ 8 ಗಂಟೆವರೆಗೆ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಕಾವಲು ಕಾಯಲಿದ್ದಾರೆ. ಎಲ್ಲ ವಿಭಾಗದ ಡಿಸಿಪಿ, 41 ಎಸಿಪಿ, 231 ಇನ್ಸ್ಪೆಕ್ಟರ್, 591 ಪಿಎಸ್ಐ, 941 ಎಎಸ್ಐ, 7 ಸಾವಿರ ಪೇದೆ ಮತ್ತು ಮುಖ್ಯಪೇದೆ ಹಾಗೂ 1,500 ಗೃಹರಕ್ಷಕ ದಳದ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆಗೆ ನಿಯೋಜಿಸಲಾಗಿದೆ. ಸಂಭ್ರಮಾಚರಣೆ ಮಾಡುವ ಆಯಾಕಟ್ಟಿನ ಪ್ರದೇಶಗಳಲ್ಲಿ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ ವ್ಯವಸ್ಥೆ ಮಾಡಲಾಗಿದೆ.
44 ಮೇಲ್ಸೇತುವೆ ಬಂದ್
ಡಿ.31ರ ರಾತ್ರಿ 10 ಗಂಟೆಯಿಂದ ಜ.1ರ ಬೆಳಗ್ಗೆ 6ರವರೆಗೆ ಕೆ.ಆರ್. ಪುರ ಮೇಲ್ಸೇತುವೆ ಹೊರತುಪಡಿಸಿ ನಗರದ 44 ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ
ಮಹಿಳೆಯರ ಜತೆ ಅನುಚಿತ ವರ್ತನೆ ಮತ್ತು ಪುಂಡಾಟಿಕೆ ನಡೆಸುವ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಮ್ಮ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದಾರೆ. 270ಕ್ಕೂ ಹೆಚ್ಚು ಹೊಯ್ಸಳ ಗಸ್ತಿನಲ್ಲಿರಲಿವೆ. ಸಂಕಷ್ಟದಲ್ಲಿ ಸಿಲುಕಿದ ಕೂಡಲೇ ‘ನಮ್ಮ100’ ಅಥವಾ ‘ಸುರಕ್ಷಾ’ ಆಪ್ ಮೂಲಕ ದೂರು ಕೊಟ್ಟರೆ ಪೊಲೀಸರು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬರಲಿದ್ದಾರೆ. ಡಿ.31ರ ತಡರಾತ್ರಿ 2 ಗಂಟೆವರೆಗೆ ಮದ್ಯ ಮಾರಾಟ ಮಾಡಲಾಗುತ್ತದೆ.
ಬಿಎಂಟಿಸಿ ಸೇವೆ
ತಡರಾತ್ರಿ 12 ಗಂಟೆವರೆಗೆ ಪ್ರಮುಖ ಬಸ್ ಮತ್ತು ಮೆಟ್ರೋ ರೈಲು ನಿಲ್ದಾಣಗಳಿಂದ ಬಿಎಂಟಿಸಿಯ ಹೆಚ್ಚುವರಿ ಬಸ್ಗಳು ಸಂಚರಿಸಲಿವೆ. ವಿಜಯನಗರ, ಮೈಸೂರು ರಸ್ತೆ ಸೆಟಲೈಟ್ ಬಸ್ ನಿಲ್ದಾಣ, ಬನಶಂಕರಿ, ಜಯನಗರ, ಗೊರಗುಂಟೆಪಾಳ್ಯ, ಜಾಲಹಳ್ಳಿ, ನಾಗಸಂದ್ರ ಮತ್ತು ಎಸ್.ವಿ. ಮೆಟ್ರೋ ನಿಲ್ದಾಣಗಳಿಂದ ಬಸ್ ಸಂಚರಿಸಲಿವೆ.
ತಡರಾತ್ರಿ 2 ಗಂಟೆವರೆಗೂ ಮೆಟ್ರೋ ರೈಲು ಸೇವೆ
ವರ್ಷಾಚರಣೆ ಸಂಭ್ರಮದಲ್ಲಿ ಭಾಗವಹಿಸುವರ ಅನುಕೂಲಕ್ಕಾಗಿ ಡಿ.31ರ ತಡರಾತ್ರಿ 2 ಗಂಟೆವರೆಗೆ ನಮ್ಮ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಲಾಗಿದೆ. ಪ್ರತಿದಿನ ರಾತ್ರಿ 11 ಗಂಟೆಗೆ ಮೆಟ್ರೋ ಸೇವೆ ಕೊನೆಯಾಗುತ್ತದೆ. ಅದರೆ ಡಿ. 31ರಂದು ಹೆಚ್ಚುವರಿ ಅವಧಿ ಕಾರ್ಯಾಚರಿಸಲಿವೆ. ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ 4 ದಿಕ್ಕುಗಳಿಗೂ ತಡರಾತ್ರಿ 2 ಗಂಟೆಗೆ ಕೊನೆಯ ರೈಲುಗಳು ತೆರಳಲಿವೆೆ. ಬೈಯಪ್ಪನಹಳ್ಳಿ ಮತ್ತು ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ತಡರಾತ್ರಿ 1.35, ನಾಯಂಡಹಳ್ಳಿಯಿಂದ 1.40, ನಾಗಸಂದ್ರದಿಂದ 1.30ಕ್ಕೆ ಕೊನೆಯ ರೈಲು ಸಂಚರಿಸಲಿದೆ. ಈ ವೇಳೆ 50 ರೂ. ಮೊತ್ತದ ಕಾಗದದ ಟಿಕೆಟ್ ಖರೀದಿಸಬೇಕು. ಎಂ.ಜಿ. ರಸ್ತೆ, ಟ್ರಿನಿಟಿ, ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಇವುಗಳನ್ನು ಬಳಸಬಹುದು. ಉಳಿದ ನಿಲ್ದಾಣಗಳಲ್ಲಿ ಟೋಕನ್ ಮತ್ತು ಸ್ಮಾರ್ಟ್ ಕಾರ್ಡ್ಗಳ ಮೂಲಕ ಸಂಚರಿಸಬಹುದು.
ಮುನ್ನೆಚ್ಚರಿಕೆ ಕ್ರಮ
1. ಖಾಸಗಿ ವಾಹನದ ಬದಲು ಮೆಟ್ರೋ, ಬಿಎಂಟಿಸಿ, ಆಟೋ, ಕ್ಯಾಬ್ ಬಳಸುವುದು ಒಳಿತು
2. ಮದ್ಯಪಾನ ಮಾಡಿ ಡ್ರೖೆವಿಂಗ್ ಮಾಡಬೇಡಿ
3. ಅತಿವೇಗ, ಅಜಾಗರೂಕತೆಯ ವಾಹನ ಚಾಲನೆ ಅಪಾಯಕಾರಿ
4. ಅಹಿತಕರ ಘಟನೆಗಳು ಕಂಡುಬಂದರೆ ‘ನಮ್ಮ-100’ಗೆ ಕರೆ ಮಾಡಿ
5. ಡ್ರಾ್ಯಗ್ ರೇಸಿಂಗ್, ವ್ಹೀಲಿಂಗ್, ದೋಷಪೂರಿತ ಸೈಲೆನ್ಸರ್, ತ್ರಿಬಲ್ ರೈಡಿಂಗ್ ಬೇಡ
6. ರಸ್ತೆಯಲ್ಲಿ ಮದ್ಯದ ಬಾಟಲ್ ಎಸೆಯುವುದು, ಗಲಾಟೆ ಮಾಡಬೇಡಿ
7. ಪಾರ್ಟಿ ವೇಳೆ ಅನ್ಯರು ತಂದುಕೊಡುವ ಪಾನೀಯ ಸೇವಿಸಬೇಡಿ. ದುರುದ್ದೇಶದಿಂದ ಮತ್ತೇರುವ ಔಷಧ ಬೆರೆಸಿರುವ ಸಾಧ್ಯತೆ ಇರುತ್ತದೆ.
8. ಅಕ್ಕಪಕ್ಕದವರಿಗೆ ಕಿರಿಕಿರಿ ಉಂಟಾಗದಂತೆ ಸಂಭ್ರಮಾಚರಿಸಿ
9. ತಡರಾತ್ರಿ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಓಡಾಟ ಬೇಡ
ಸಿಸಿ ಕ್ಯಾಮರಾ ಕಣ್ಗಾವಲು
ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ.ಜಿ. ರಸ್ತೆ, ಇಂದಿರಾನಗರ, ಕೋರ ಮಂಗಲ, ಜೆ.ಪಿ. ನಗರ ಸೇರಿ ಆಯಕಟ್ಟಿನ ಪ್ರದೇಶಗಳಲ್ಲಿ ಸಾರ್ವಜನಿಕರ ಚಲನವಲಗಳ ಮೇಲೆ ನಿಗಾವಹಿಸಲು 1,500 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವಾಚ್ ಟವರ್ಗಳನ್ನು ನಿರ್ವಿುಸಲಾಗಿದ್ದು, ಡ್ರೋನ್ ಕ್ಯಾಮರಾಗಳ ಕಣ್ಗಾವಲು ಇರಲಿದೆ. ಪೊಲೀಸರು ಡಿ.31ರಂದು ಸಂಜೆ 4ರಿಂದ ಜ.1ರ ಬೆಳಗ್ಗೆ 8ರವರೆಗೆ ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮಹಿಳೆಯರ ರಕ್ಷಣೆಗೆ ಸೆಲ್
ಹೊಸ ವರ್ಷಾಚರಣೆ ವೇಳೆ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದರೆ ಅವರ ರಕ್ಷಣೆ ಮಾಡುವ ಸಲುವಾಗಿಯೇ ಪೊಲೀಸರಲ್ಲಿ ವಿಶೇಷ ಸೆಲ್ ಸ್ಥಾಪನೆ ಮಾಡಲಾಗಿದೆ. ನಮ್ಮ-100 ಅಥವಾ ಸುರಕ್ಷಾ ಆಪ್ನಲ್ಲಿ ದೂರು ಬಂದರೆ ತಕ್ಷಣ ಮಹಿಳಾ ಪೊಲೀಸರು ಸ್ಥಳಕ್ಕೆ ತೆರಳಿ ಸಹಾಯ ಮಾಡಲಿದ್ದಾರೆ.
ತಡರಾತ್ರಿ 2 ವರೆಗೂ ಮದ್ಯಮಾರಾಟ
ಮದ್ಯ ಮಾರಾಟವನ್ನು ತಡರಾತ್ರಿ 2 ಗಂಟೆವರೆಗೂ ವಿಸ್ತರಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ ಮದ್ಯ ಮಾರಾಟ ರಾತ್ರಿ 11 ಗಂಟೆ ಮತ್ತು ರೆಸ್ಟೋರೆಂಟ್ಗಳ ತೆರೆದಿರಲು ಅವಕಾಶ ಕಲ್ಪಿಸಲಾಗಿತ್ತು. ವರ್ಷಾಚರಣೆ ಹಿನ್ನೆಲೆಯಲ್ಲಿ ತಡರಾತ್ರಿ 2 ಗಂಟೆ ವರೆಗೂ ವಿಸ್ತರಿಸಿ ಕಮಿಷನರ್ ಆದೇಶಿಸಿದ್ದಾರೆ.