

ಬೆಂಗಳೂರು: ರಾಜಧಾನಿಯಲ್ಲಿ ಮಳೆಯಿಂದಾಗುವ ಅನಾಹುತ ತಡೆಯಲು ಇಂಜಿನಿಯರ್ ನೇತೃತ್ವದಲ್ಲಿ ಎಲ್ಲ ವಾರ್ಡ್ಗಳಲ್ಲೂ ತಂಡ ರಚಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ಕರೆ ಸ್ವೀಕಾರಕ್ಕೆ ಪಾಲಿಕೆಯಲ್ಲಿ 71 ಸಹಾಯವಾಣಿ ಸಜ್ಜು ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಗಳಿದ್ದರೂ ದೂರು ನೀಡಲು ಕೇಂದ್ರ ಕಚೇರಿ ಒಳಗೊಂಡಂತೆ 8 ವಲಯಗಳಲ್ಲಿ ಕಂಟ್ರೋಲ್ ರೂಂಗಳನ್ನು ರಚಿಸಿ ಸಹಾಯವಾಣಿ ನೀಡಲಾಗಿದೆ. ಅದರ ಜತೆಗೆ ಮಳೆಯಿಂದಾಗುವ ತೊಂದರೆಗಳ ಬಗ್ಗೆ ದೂರು ನೀಡಲು ತಿಂಗಳ ಹಿಂದೆಯೇ ಹೆಚ್ಚುವರಿಯಾಗಿ 63 ತಾತ್ಕಾಲಿಕ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿತ್ತು. ಸಿಎಂ ಎಚ್ಚರಿಕೆ ನೀಡಿದ ನಂತರ 71 ಸಹಾಯವಾಣಿಗಳನ್ನು ಸನ್ನದ್ಧವಾಗಿಡಲಾಗಿದೆ. ಪಾಲಿಕೆ ಎಲ್ಲ ಅಧಿಕಾರಿಗಳು ಕಂಟ್ರೋಲ್ ರೂಂಗಳ ಸಹಾಯವಾಣಿ ಸಂಖ್ಯೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ವಾರ್ಡ್ ಮಟ್ಟದಲ್ಲಿ ಸಹಾಯವಾಣಿ ಸಂಖ್ಯೆಯನ್ನು ಜನರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಒಂದು ವಾರದಿಂದ ನಗರದಲ್ಲಿ ಮುಂಗಾರು-ಪೂರ್ವ ಮಳೆ ಸುರಿಯುತ್ತಿದ್ದು, ಈವರೆಗೆ 400ಕ್ಕೂ ಹೆಚ್ಚು ಮರಗಳು ಹಾಗೂ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ಬಸ್, ಕಾರು, ಬೈಕ್ ಹಾಗೂ ಆಟೋಗಳು ಸೇರಿ ನೂರಾರು ವಾಹನಗಳು ಹಾನಿಗೀಡಾಗಿವೆ. ಮರ ಬಿದ್ದು ಮಹಿಳೆ ಹಾಗೂ ಇಟ್ಟಿಗೆ ಗೋಡೆ ಕುಸಿದು ಯುವತಿ ಮೃತಪಟ್ಟಿದ್ದಾರೆ. 5 ಸೆಂ.ಮೀ. ಮಳೆ ಬಂದರೂ 211 ಪ್ರದೇಶಗಳು ಪ್ರವಾಹ ಉಂಟಾಗುವ ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿ ಪ್ರವಾಹ ತಡೆದು ಜನರನ್ನು ರಕ್ಷಣೆ ಮಾಡುವುದು ಸವಾಲಾಗಿದೆ. ಇಂತಹ ವೇಳೆ ನಿರ್ಲಕ್ಷ್ಯ ವಹಿಸಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಮೈಚಳಿ ಬಿಡಿಸಿದ್ದು, ವಿವಿಧ ತುರ್ತು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.
ವಾರ್ಡ್ ಮಟ್ಟದಲ್ಲಿ ತಂಡಗಳು: ಮಳೆಯಿಂದ ಮರ ಹಾಗೂ ಕೊಂಬೆಗಳು ಬಿದ್ದರೆ ಅರಣ್ಯ ಇಲಾಖೆಯಿಂದ ಗುರುತಿಸಲಾದ 21 ತಂಡಗಳ ಸಿಬ್ಬಂದಿ ಮಾತ್ರ ತೆರವುಗೊಳಿಸುತ್ತಿದ್ದರು. ಆದರೆ, ಇಷ್ಟು ಸದಸ್ಯರಿಂದ ತೆರವು ಕಾರ್ಯ ಭರದಿಂದ ಸಾಗದ ಕಾರಣ ವಾರ್ಡ್ ಮಟ್ಟದ ಇಂಜಿನಿಯರ್ಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲು ಬಿಬಿಎಂಪಿ ಮುಂದಾಗಿದೆ. ಅರಣ್ಯ ಇಲಾಖೆ ತಂಡಗಳು ರಸ್ತೆಯಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿದರೆ, ವಾರ್ಡ್ ಮಟ್ಟದ ತಂಡಗಳು ಪಾದಚಾರಿ ಮಾರ್ಗ ಹಾಗೂ ಮನೆಗೆ ಆಗುವ ತೊಂದರೆ ನಿವಾರಣೆಗೆ ಕಾರ್ಯನಿರ್ವಹಿಸಲಿವೆ. ಈ ತಂಡದಲ್ಲಿ ಇಂಜಿನಿಯರ್ಗಳು, ಆರೋಗ್ಯ ಸಿಬ್ಬಂದಿ, ಪೌರಕಾರ್ವಿುಕರು ಇರುತ್ತಾರೆ.
ಎರಡು ದಿನದಲ್ಲಿ ತಂಡಗಳ ರಚನೆ: ಮಳೆಯಿಂದಾಗುವ ಅನಾಹುತ ತಡೆಯಲು ಈ ಹಿಂದೆ ಸಭೆ ನಡೆಸಿದ್ದ ಕಂದಾಯ ಸಚಿವ ಆರ್. ಅಶೋಕ್, ವಿಧಾನಸಭಾ ಕ್ಷೇತ್ರವಾರು ತಂಡ ಗಳನ್ನು ರಚಿಸುವಂತೆ ಸೂಚಿಸಿದ್ದರು. ಈ ಬಗ್ಗೆ ಈವರೆಗೂ ಕ್ರಮ ಕೈಗೊಳ್ಳದ ಪಾಲಿಕೆ, ಜೂ.2ರೊಳಗಾಗಿ ಈಗಿರುವ ಸಿಬ್ಬಂದಿ ಬಳಕೆ ಮಾಡಿಕೊಂಡು 28 ತಂಡಗಳನ್ನು ರಚಿಸಲಿದೆ. ಅದರಲ್ಲಿ ಪ್ರಸ್ತುತ ಅರಣ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ 21 ತಂಡಗಳ ಸದಸ್ಯರೂ ಇರಲಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಇನ್ನೂ 4 ದಿನ ಮಳೆ ಸಂಭವ: ರಾಜ್ಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಬೆಂಗಳೂರು ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಇನ್ನೂ 4 ದಿನ ಮಳೆ ಸುರಿಯುವ ಸಂಭವವಿದೆ. ಹೀಗಾಗಿ ಮರಗಳಡಿ ವಾಹನ ನಿಲ್ಲಿಸದಂತೆ ಹಾಗೂ ಮಕ್ಕಳ ಬಗ್ಗೆ ಜಾಗ್ರತೆ ವಹಿಸುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ಸೂಚನೆಗಳನ್ನು ನೀಡುತ್ತಿದೆ. ಆದರೆ, ನಗರದ ಕೆಲವೆಡೆ ಮರಗಳ ತೆರವು ಕಾರ್ಯ ಬಾಕಿಯಿದ್ದು, ದೂರು ನೀಡುವುದನ್ನು ಜನರು ಮುಂದುವರಿಸಿದ್ದಾರೆ.