ಬ್ಯಾಚುಲರ್ಸ್ ಮೇಲೆ ಖಾಕಿ ಕಣ್ಣು?: ಬಾಡಿಗೆಗೆ ನೆಲೆಸಿರುವ ಅವಿವಾಹಿತರ ಮಾಹಿತಿ ಕೋರಿರುವ ಸುತ್ತೋಲೆ ವೈರಲ್

Police
Published on

ಬೆಂಗಳೂರು: ಅಪಾರ್ಟ್​ವೆುಂಟ್ ಫ್ಲ್ಯಾಟ್ ಹಾಗೂ ಮನೆಗಳಲ್ಲಿ ನೆಲೆಸಿರುವ ಯುವಕರು ಮತ್ತು ಅವಿವಾಹಿತರ ಚಟುವಟಿಕೆಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಸರ್ಕಾರ ಸೂಚಿಸಿರುವ ಸುತ್ತೋಲೆಯೊಂದು ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಡ್ರಗ್ ಮಾಫಿಯಾವನ್ನು ಮಟ್ಟಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಪೊಲೀಸರಿಗೆ ಕೆಲ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಅಪಾರ್ಟ್​ವೆುಂಟ್​ಗಳಲ್ಲಿನ ಫ್ಲ್ಯಾಟ್ ಹಾಗೂ ಮನೆಗಳಲ್ಲಿ ಬಾಡಿಗೆಗೆ ನೆಲೆಸಿರುವ ಅವಿವಾಹಿತ ಯುವಕರ ಬಗ್ಗೆ ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಯುವಕರ ಹೆಸರು, ಫೋನ್ ನಂಬರ್, ವಿಳಾಸ, ಫ್ಲ್ಯಾಟ್ ಸಂಖ್ಯೆ ಪಡೆಯಬೇಕು. ಯುವಕರು ಮನೆಗೆ ತಡರಾತ್ರಿ ಅನುಮಾನಾಸ್ಪದವಾಗಿ ಬಂದು ಹೋಗುವುದು ಹಾಗೂ ಪಾರ್ಟಿ ಮಾಡುವುದು ಕಂಡುಬಂದರೆ ಪೊಲೀಸರಿಗೆ ತಿಳಿಸಿ. ಅಲ್ಲದೆ, ಮಾದಕವಸ್ತುಗಳ ಸಂಗ್ರಹ ಮತ್ತು ಮಾರಾಟ ಮಾಡುವುದು ಗೊತ್ತಾದರೆ ಗಮನಕ್ಕೆ ತರುವಂತೆ ಅಪಾರ್ಟ್​ವೆುಂಟ್ ಹಾಗೂ ಮನೆ ಮಾಲೀಕರಿಗೆ ಸೂಚಿಸಿರುವುದು ಪತ್ರದಲ್ಲಿ ಉಲ್ಲೇಖವಾಗಿದೆ.

ಈ ಪತ್ರವನ್ನು ಸುರೇಖಾ ರಾವ್ ಎಂಬುವರು ಟ್ವಿಟರ್ ಮೂಲಕ ನಗರ ಪೊಲೀಸರ ಗಮನಕ್ಕೆ ತಂದಿದ್ದು, ಇದು ನಿಜವೇ ಎಂದು ಕೇಳಿದ್ದಾರೆ. ಇನ್ನೂ ಕೆಲವರು, ವೈಟ್​ಫೀಲ್ಡ್ ಮತ್ತು ಕಾಡುಗುಡಿ ಪೊಲೀಸರು ಹೊರಡಿಸಿರುವ ಆದೇಶ ಎಂದು ಪ್ರತಿಕ್ರಿಯಿಸಿದ್ದಾರೆ.

ಅಂಕಿತ್ ಸಾವಂತ್ ಎಂಬುವರು, ‘ಈಗಾಗಲೇ ಬೆಂಗಳೂರಿನಲ್ಲಿ ಅವಿವಾಹಿತ ಯುವಕರಿಗೆ ಮನೆ ಬಾಡಿಗೆಗೆ ಸಿಗುವುದೇ ಕಷ್ಟವಾಗಿದೆ. ಇಂಥ ಆದೇಶದಿಂದ ಮತ್ತಷ್ಟು ಸಮಸ್ಯೆಯಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ‘ಅವಿವಾಹಿತರು ಮಾತ್ರ ಡ್ರಗ್ಸ್ ತೆಗೆದುಕೊಳ್ಳುತ್ತಾರೆಯೇ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಇನ್ನಿತರರು ಪ್ರಶ್ನಿಸಿದ್ದಾರೆ.

ಇದಕ್ಕೆ ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ‘ಇಂತಹ ಯಾವುದೇ ರೀತಿಯ ಸುತ್ತೋಲೆ ಅಥವಾ ನೋಟಿಸ್ ಅನ್ನು ಕಾಡುಗುಡಿ ಮತ್ತು ವೈಟ್​ಫೀಲ್ಡ್ ಠಾಣೆ ಪೊಲೀಸರು ಜಾರಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಯಾವ ಸರ್ಕಾರ ಸುತ್ತೋಲೆ ಹೊರಡಿಸಿದೆ, ಇಷ್ಟಕ್ಕೂ ಸುತ್ತೋಲೆ ಅಸಲಿಯೋ ಅಥವಾ ನಕಲಿಯೋ ಎಂಬುದು ದೃಢಪಟ್ಟಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net