

ಅವಿನಾಶ್ ಜೈನಹಳ್ಳಿ ಮೈಸೂರು
ಬೆಂಗಳೂರು - ಮೈಸೂರು ನಡುವಿನ ದಶಪಥ ಹೆದ್ದಾರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಫೆಬ್ರವರಿ ಅಂತ್ಯಕ್ಕೆ ಸೇವೆಗೆ ಮುಕ್ತಗೊಳ್ಳಲಿದೆ. ಇದು ಮೈಸೂರಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ.
ದಶಪಥ ಹೆದ್ದಾರಿಯಿಂದ ಮೈಸೂರು ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಇದ್ದು, ಬೃಹತ್ ಕೈಗಾರಿಕೆಗಳು ಸಾಂಸ್ಕೃತಿಕ ನಗರಿಗೆ ಬರಲು ರತ್ನಗಂಬಳಿ ಹಾಸಲಿದೆ. ಇದರಿಂದ ಮೈಸೂರನ್ನು ಅಭಿವೃದ್ಧಿಯ ಪಥದತ್ತ ಕರೆದೊಯ್ಯಲಿದ್ದು ಸುಗಮ ಸಂಚಾರದ ವ್ಯವಸ್ಥೆಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಅಲ್ಲದೆ ಕೈಗಾರಿಕೋದ್ಯಮ, ರಿಯಲ್ ಎಸ್ಟೇಟ್ ಉದ್ಯಮ, ಐಟಿ ಉದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲಿದ್ದು ಬೃಹತ್ ಕೈಗಾರಿಕೆಗಳು ಸಾಂಸ್ಕೃತಿಕ ನಗರಿಯತ್ತ ಬರಲಿವೆ.
ಮೈಸೂರು ಮತ್ತಷ್ಟು ಸುಂದರವಾಗಿ ಕಾಣಲು ಹಾಗೂ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಹಾಯಕವಾಗಲಿದೆ. ರಸ್ತೆ, ನೀರು ಕೈಗಾರಿಕೆ ಸ್ಥಾಪಿಸಲು ಭೂಮಿ, ದುಡಿಯಲು ಕಾರ್ಮಿಕರು ಹಾಗೂ ಯುವ ಸಮೂಹ ಬೇಕು. ಬೆಂಗಳೂರು ಪಕ್ಕದಲ್ಲಿರುವ ಎರಡನೇ ಕೈಗಾರಿಕಾ ಹಬ್ ಆಗಿರುವ ಮೈಸೂರು ಸಾರಿಗೆ ಸಮಸ್ಯೆಯಿಂದ ಹಿಂದೆ ಬಿದ್ದಿತ್ತು. ದಶಪಥ ರಸ್ತೆಯು ಇದನ್ನು ಮರೆಮಾಚಿ ಮೈಸೂರಿನ ಭವಿಷ್ಯವನ್ನು ಬದಲಿಸಲಿದೆ. ಸ್ಥಳೀಯರಿಗೆ ಉದ್ಯೋಗ ಸಿಗಲಿದ್ದು, ಜನರ ಜೀವನ ಮಟ್ಟ ಸುಧಾರಿಸುವ ನಿರೀಕ್ಷೆಗಳಿವೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ರಸ್ತೆಯಲ್ಲಿ 6 ಪಥದ ಎಕ್ಸ್‌ಪ್ರೆಸ್ ಹೈವೇ ನಿರ್ಮಿಸಲಾಗಿದೆ. ಆ ಆರರಲ್ಲಿ ಮೂರು ಬೆಂಗಳೂರಿನ ಕಡೆ, ಮೂರು ಮೈಸೂರಿನ ಕಡೆ ಇದೆ. ಇನ್ನು ಎರಡು ಭಾಗದ ಸರ್ವಿಸ್ ರಸ್ತೆಗಳಲ್ಲೂ ತಲಾ ಎರಡು ಪಥಗಳನ್ನು ನಿರ್ಮಿಸಲಾಗಿದೆ.
ಬೆಂಗಳೂರು -ಮೈಸೂರು ನಡುವಿನ 117 ಕಿ.ಮೀ. ಉದ್ದದ ದಶಪಥ ಕಾಮಗಾರಿ ಪೂರ್ಣಗೊಂಡಿದೆ. ಬೆಂಗಳೂರಿನಿಂದ ನಿಡಘಟ್ಟದವರೆಗಿನ 56.2 ಕಿ.ಮೀ. ದೂರದ ರಸ್ತೆ ಸಿದ್ಧವಾಗಿದೆ. ಎರಡನೇ ಹಂತದ ನಿಡಘಟ್ಟದಿಂದ ಮೈಸೂರು ವರೆಗಿನ 61 ಕಿ.ಮೀ. ದೂರದ ರಸ್ತೆಯಲ್ಲಿ ಒಂದಿಷ್ಟು ಕೆಲಸಗಳು ಬಾಕಿ ಉಳಿದಿದ್ದು, ಇದು ಫೆ.23ರ ವೇಳೆಗೆ ಪೂರ್ಣಗೊಳ್ಳಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳಿಂದಲೇ ಹೆದ್ದಾರಿ ಸೇವೆಗೆ ಮುಕ್ತವಾಗಲಿದೆ.
ಆರು ಪಥ ಎಕ್ಸ್‌ಪ್ರೆಸ್ ಹೈವೇ ಮತ್ತು ಉಳಿದ ನಾಲ್ಕು ಪಥವು ಸರ್ವೀಸ್ ರಸ್ತೆಯಾಗಿ ಬಳಕೆ ಆಗಲಿದೆ. 117 ಕಿ.ಮೀ. ಉದ್ದದ ಈ ಯೋಜನೆಯನ್ನು ಎರಡು ಹಂತದಲ್ಲಿ ಒಟ್ಟಾರೆ 8,408 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇನ್ನು ಹೆಚ್ಚುವರಿ ಹಣ ಮಂಜೂರಾಗಿದೆ. ದಶಪಥ ಹೆದ್ದಾರಿ 9 ಬಹತ್ ಸೇತುವೆ, 44 ಸಣ್ಣ ಸೇತುವೆ, 8.7 ಕಿಮೀ ಉದ್ದ ಎಲಿವೇಟೆಡ್ ಹೈವೆ ಹೆಲ್ 4 ರೈಲ್ವೆ ಮೇಲ್ಸೆತುವೆ, 28 ವೆಹಿಕಲ್ ಅಂಡರ್ ಪಾಸ್, 14 ಪಾದಚಾರಿಗಳ ಅಂಡರ್ ಪಾಸ್‌ಗಳನ್ನು ಒಳಗೊಂಡಿದೆ. ಜತೆಗೆ ನಗರ ಪಟ್ಟಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಎಂಟ್ರಿ-ಎಕ್ಸಿಟ್‌ಗಳನ್ನು ನೀಡಲಾಗುತ್ತಿದೆ.
ಆರು ಪಥದ ಎಕ್ಸ್‌ಪ್ರೆಸ್ ವೇ ಉದ್ದಕ್ಕೂ ಎರಡು ಬದಿಯಲ್ಲಿ 6 ಅಡಿ ಎತ್ತರದಲ್ಲಿ ಚೈನ್ ಲಿಂಕ್ ಬೇಲಿ ನಿರ್ಮಾಣವಾಗಲಿದ್ದು, ಬಿಡದಿ ರಾಮನಗರ-ಚನ್ನಪಟ್ಟಣ ಮದ್ದೂರು ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ಮಾತ್ರ ಪ್ರವೇಶ ಹಾಗೂ ನಿರ್ಗಮನ ದ್ವಾರ ಇರುತ್ತದೆ. ಉಳಿದ ಕಡೆಗಳಲ್ಲಿ ಸಂಪೂರ್ಣವಾಗಿ ಚೈನ್ ಲಿಂಕ್ ಇದ್ದು, ಇದರಿಂದ ಜನ -ಜಾನುವಾರುಗಳು ಪ್ರವೇಶಿಸಲು, ಮಧ್ಯದಲ್ಲಿ ವಾಹನಗಳು ಬೇರೆಡೆ ಹೋಗಲು ಅವಕಾಶ ಕಷ್ಟವಾಗಿದೆ.
ಮೈಸೂರು ಭಾಗದ ಜಿಲ್ಲೆಗಳಿಗೆ ಅನುಕೂಲ:
ಈ ರಸ್ತೆ ಅಭಿವೃದ್ಧಿಯಿಂದಾಗಿ ಮೈಸೂರು ನಗರದಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ದೊರೆಯುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಜತೆಗೆ ಊಟಿ, ಕೇರಳ, ಮಡಿಕೇರಿ, ಮಂಗಳೂರಿಗೆ ಸಂಪರ್ಕ ಸುಲಭವಾಗುತ್ತದೆ. ಬೆಂಗಳೂರಿನಿಂದ ಮೈಸೂರಿಗೆ ಕೇವಲ 2 ಗಂಟೆಯಲ್ಲಿ ತಲುಪಬಹುದಾಗಿದೆ.
ಮುಖ್ಯವಾಗಿ ಮೈಸೂರು ಭಾಗದ ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯ ಜನರಿಗೂ ಅನುಕೂಲವಾಗಿದೆ. ಸದರಿ ಜಿಲ್ಲೆಗೆ ಬೆಂಗಳೂರಿನಿಂದ ಓಡಾಡುವವರಿಗೆ ಹಾಗೂ ಸರಕುಗಳನ್ನು ಸಾಗಿಸುವವರಿಗೂ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.
ಮೈಸೂರಿನ ಬಹುತೇಕ ವ್ಯವಹಾರಗಳು ಹೊಸದಿಕ್ಕು ಕಾಣಲಿದೆ. ಮುಖ್ಯವಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲವಾಗಲಿದೆ. ಮೈಸೂರು ಭಾಗದ ಹಾಗೂ ಹೆದ್ದಾರಿಯ ಸಮೀಪದ ಭೂಮಿಯ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರು -ಮೈಸೂರು ನಡುವಿನ ದಶಪಥ ಹೆದ್ದಾರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಫೆಬ್ರವರಿ ಅಂತ್ಯಕ್ಕೆ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮೂಲಕ ಉದ್ಘಾಟನೆ ಮಾಡಿಸಲಾಗುತ್ತದೆ. ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣದಿಂದಾಗಿ ಪ್ರಯಾಣದ ಅವಧಿ ಕಡಿಮೆ ಆಗುವ ಜತೆಗೆ, ಬೆಂಗಳೂರಿನ ಮೇಲಿನ ಒತ್ತಡವೂ ಸಂಪೂರ್ಣ ಕಡಿಮೆ ಆಗಲಿದೆ. ಕೈಗಾರಿಕೆ, ಐಟಿ ಉದ್ಯಮಗಳು ಬೆಂಗಳೂರಿನಿಂದ ಮೈಸೂರು ಹಾಗೂ ಎರಡೂ ನಗರಗಳ ನಡುವಿನ ಇತರ ಪಟ್ಟಣಗಳಿಗೂ ವಿಸ್ತರಣೆ ಆಗಲಿವೆ.ನಿತಿನ್ ಗಡ್ಕರಿ ಕೇಂದ್ರ ಹೆದ್ದಾರಿ ಖಾತೆ ಸಚಿವ ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯ ಬಿಡದಿ, ರಾಮನಗರ, ಚನ್ನಪಟ್ಟಣ ಬಳಿ ಆಗಮನ-ನಿರ್ಗಮನದ ಬಗ್ಗೆ ರಸ್ತೆ ಸಂಪರ್ಕಿಸುವ ಕೆಲಸ ಆಗುತ್ತದೆ. ಅದಕ್ಕಾಗಿ 2001 ಕೋಟಿ ರೂ. ಬಿಡುಗಡೆ ಆಗಿದೆ. ಹೋಟೆಲ್, ಆಸ್ಪತ್ರೆ, ಚನ್ನಪಟ್ಟಣ ಗೊಂಬೆಗಳ ಮಾರಾಟಕ್ಕೂ ಹೆದ್ದಾರಿಯಲ್ಲಿ ಅವಕಾಶ ನೀಡಲಾಗುತ್ತಿದೆ. ಬೇರೆ ದೇಶದಲ್ಲಿರುವ ಎಲ್ಲ ಮಾದರಿಯನ್ನು ಇಲ್ಲಿ ತರುವ ಬಗ್ಗೆ ಸಚಿವರು ಆಸಕ್ತರಾಗಿದ್ದಾರೆ.ಪ್ರತಾಪ್ ಸಿಂಹ ಸಂಸದ