

ಬೆಂಗಳೂರು: ಮದುವೆಯಾದ ಬಳಿಕ ತಮ್ಮ ಗಂಡನ ಜತೆ ಸುಖವಾಗಿ ಬಾಳಬೇಕು ಎಂದೆಲ್ಲ ನೂರಾರು ಕನಸ್ಸನ್ನು ಕಟ್ಟಿಕೊಂಡು ಮೂರು ಗಂಟಿಗೆ ಕೊರಳೊಡ್ಡುವ ಹೆಣ್ಣು ಮಕ್ಕಳು, ಅದೇ ಪತಿಯಿಂದ ಬಾಳು ನುಚ್ಚುನೂರಾಗುವುದು ಮತ್ತು ದುರಂತ ಅಂತ್ಯ ಕಾಣುವುದು ಹೆತ್ತವರ ಅಕ್ರಂದನವನ್ನು ಮುಗಿಲು ಮುಟ್ಟಿಸುತ್ತಿವೆ. ಇಲ್ಲೊಂದು ಪ್ರಕರಣ ಕೂಡ ಅದೇ ಸಾಲಿಗೆ ಸೇರಿದ್ದು, ವೃತ್ತಿಯಲ್ಲಿ ವೈದ್ಯೆಯಾಗಿದ್ದ (Doctor Murder Case) ಪತ್ನಿಯನ್ನು ಪಾಪಿ ಪತಿ ಕೊಲೆಗೈದ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.
'ನ್ಯೂಸ್ 18' ವರದಿ ಪ್ರಕಾರ, ಆರು ತಿಂಗಳ ಹಿಂದೆ ಆಕೆಯದ್ದು ಸಹಜ ಸಾವು ಎಂದು ನಿರ್ಧರಿಸಿ, ಮಣ್ಣು ಮಾಡಲಾಗಿತ್ತು. ಆದರೆ, ಈಗ ಆಕೆಯನ್ನು ವೈದ್ಯ ಪತಿಯೇ ಕೊಲೆ ಮಾಡಿದ ಶಾಕಿಂಗ್ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸ್ಫೋಟಕ ಮಾಹಿತಿ ಬೆನ್ನಲ್ಲೇ ಸದ್ಯ ಪೊಲೀಸರು ಆರೋಪಿ ಡಾ. ಮಹೇಂದ್ರ ರೆಡ್ಡಿ ಜಿ.ಎಸ್ನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಮೃತ ವೈದ್ಯೆಯನ್ನು ಡಾ. ಕೃತಿಕಾ ಎಂ. ರೆಡ್ಡಿ ಎಂದು ಗುರುತಿಸಲಾಗಿದೆ.
ಈ ವರ್ಷದ ಏಪ್ರಿಲ್ 24ರಂದು ಆಕೆ ಕೊಲೆಯಾಗಿದ್ದಾಗಿ ವರದಿಯಾಗಿದೆ. ಬೆಂಗಳೂರಿನ ಮಾರತಹಳ್ಳಿಯ ಮುನ್ನೇಕೊಳಲದಲ್ಲಿರುವ ತಮ್ಮ ಮನೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಕೃತಿಕಾ ಮೃತದೇಹ ಪತ್ತೆಯಾಯಿತು. ಈ ವೇಳೆ ಹೆಂಡತಿಗೆ ಜೀರ್ಣಕಾರಿ ಮತ್ತು ಲೋ ಬಿಪಿ ಸಮಸ್ಯೆಗಳಿತ್ತು. ತೀರ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆ, ಅಕಾಲಿಕ ಸಾವನ್ನಪ್ಪಿದಳು ಎಂದು ಆರಂಭದಲ್ಲಿ ಕುಟುಂಬಸ್ಥರಿಗೆ ಮನವರಿಕೆ ಮಾಡಿದ್ದ ಎನ್ನಲಾಗಿದೆ.
ಈ ಮಾತುಗಳಿಗ ಒಪ್ಪದ ಕೃತಿಕಾ ಹೆತ್ತವರು, ನಮಗೆ ಮಗಳ ಸಾವಿನ ಬಗ್ಗೆ ಅನುಮಾನಗಳಿವೆ. ದಯವಿಟ್ಟು ಅವಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಎಂದು ಪೊಲೀಸರಲ್ಲಿ ದೂರಿನ ಮೂಲಕ ಮನವಿ ಮಾಡಿಕೊಂಡ ಬೆನ್ನಲ್ಲೇ ಖಾಕಿ ತನಿಖೆಗೆ ತಂಡವನ್ನು ರಚಿಸಿತು. ಅಂತೆಯೇ, ವರದಿ ತೆರೆದ ಪೊಲೀಸರಿಗೆ ಡಾ. ಮಹೇಂದ್ರ ರೆಡ್ಡಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿರುವುದು ಸ್ಪಷ್ಟವಾಗಿದೆ. 'ಪ್ರೊಪೋಫೋಲ್' ಎಂಬ ನಿಯಂತ್ರಿತ ಅರಿವಳಿಕೆಯನ್ನು ಆಕೆಯ ಉಸಿರು ನಿಲ್ಲಿಸಲು ಬಳಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಇದು ಉಸಿರಾಟದ ವೈಫಲ್ಯ ಮತ್ತು ಸಾವಿಗೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (FSL) ವರದಿಗಳು ಸೂಚಿಸಿವೆ.
ಈ ಬಗ್ಗೆ ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, "ಇದು ಅನುಮಾನಾಸ್ಪದ ಸಾವು ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಆದರೆ, ಯಾರೊಬ್ಬರು ದೂರು ನೀಡಲು ಮುಂದಾಗಿರಲಿಲ್ಲ. ನಾವು ಇದನ್ನು ಅಸಹಜ ಸಾವು ಎಂದೇ ರಿಪೋರ್ಟ್ ಮಾಡಿದ್ದೆವು. ಬಳಿಕ ಅವರ ಕುಟುಂಬಸ್ಥರ ಮನವಿ ನಂತರ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಸಾಕ್ಷ್ಯಗಳನ್ನು ಸಂಗ್ರಹಿಸಿ, ಅದನ್ನು ಎಫ್‌ಎಸ್‌ಎಲ್‌ಗೂ ಕಳುಹಿಸಲಾಯಿತು. ವರದಿಯಲ್ಲಿ, ಆಕೆಯ ಸಾವಿಗೆ ಅಧಿಕ ಪ್ರಮಾಣದಲ್ಲಿ ನೀಡಿದ ಪ್ರೊಪೋಫೋಲ್ ಎಂಬ ನಿದ್ರಾಜನಕವೇ ಕಾರಣ ಎಂಬುದು ನಮಗೆ ತಿಳಿಯಿತು. ಪ್ರಸ್ತುತ, ಮೃತರ ತಂದೆ ಆರೋಪಿ ವಿರುದ್ಧ ದೂರು ದಾಖಲಿಸಿದ ಬೆನ್ನಲ್ಲೇ ನಾವು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದೇವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).