ಬೆಂಗಳೂರು-ಮುಂಬೈ ರೈಲು ರಾಜ್ಯದ ಪ್ರಮುಖ ನಗರಗಳಿಂದ ಸಂಚರಿಸಲಿ

New Singhi New
Published on

ಹುಬ್ಬಳ್ಳಿ : ನೂತನವಾಗಿ ಪ್ರಾರಂಭಿಸಿರುವ ಬೆಂಗಳೂರು- ಮುಂಬೈ ಸೂಪರ್ ಫಾಸ್ಟ್ ರೈಲು ಕರ್ನಾಟಕದ ಪ್ರಮುಖ ನಗರಗಳಿಂದ ಸಂಚರಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಆಗ್ರಹಿಸಿದ್ದಾರೆ.

ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿರುವ ಮಹೇಂದ್ರ ಸಿಂಘಿ, ಈ ರೈಲು ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮೀರಜ, ಪುಣೆ ಮಾರ್ಗವಾಗಿ ಸಂಚರಿಸಿದರೆ ಕರ್ನಾಟಕದ ಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ತಿಳಿಸಿದ್ದಾರೆ.

ಇದೀಗ ಈ ರೈಲು ಧರ್ವವರಮ್​-ಗುಂತಕಲ್-ವಾಡಿ-ಸೊಲ್ಲಾಪುರ-ದೌಂಡ-ಪುಣೆ ಮಾರ್ಗವಾಗಿ ಸಂಚರಿಸುತ್ತದೆ. ಈ ಮಾರ್ಗದಲ್ಲಿ ಕೇವಲ 150 ಕಿಮೀವರೆಗೆ ಮಾತ್ರ ಕರ್ನಾಟಕದಲ್ಲಿ ಸಂಚರಿಸುವುದರಿಂದ ರಾಜ್ಯದ ಶೇ. 13ರಷ್ಟು ಜನರಿಗೆ ಮಾತ್ರ ಪ್ರಯೋಜನವಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮಿರಜ, ಪುಣೆ ಮಾರ್ಗದಲ್ಲಿ ಸಂಚರಿಸಿದರೆ ರಾಜ್ಯ 650 ಕಿಮೀ ಅನ್ನು ಈ ರೈಲು ಕ್ರಮಿಸುತ್ತದೆ ಹಾಗೂ ಇದರಿಂದ ರಾಜ್ಯದ ಶೇ. 48ರಷ್ಟು ಜನರಿಗೆ ಉಪಯೋಗವಾಗುತ್ತದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರನ್ನು ಹುಬ್ಬಳ್ಳಿಯ ಅವರ ನಿವಾಸದಲ್ಲಿ ಭೇಟಿಯಾದ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗ, ರಾಜ್ಯದ ಪ್ರಮುಖ ನಗರಗಳ ಮೂಲಕ ಬೆಂಗಳೂರು- ಮುಂಬೈ ಸೂಪರ್ ಫಾಸ್ಟ್ ರೈಲು ಸಂಚರಿಸುವದರ ಅಗತ್ಯತೆ ಬಗ್ಗೆ ಚರ್ಚೆ ನಡೆಸಿದರು.

ಇದೇ ಸಂದರ್ಭದಲ್ಲಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ಸಂಸದ ತೇಜಸ್ವಿಸೂರ್ಯ ಅವರೊಂದಿಗೆ ಜಗದೀಶ ಶೆಟ್ಟರ್ ಫೋನ್ ಮೂಲಕ ರ್ಚಚಿಸಿ, ಬೆಂಗಳೂರು-ಮುಂಬೈ ರೈಲು ಕರ್ನಾಟಕದ ಪ್ರಮುಖ ನಗರಗಳಿಂದ ಸಂಚರಿಸಿದರೆ ಆಗುವ ಪ್ರಯೋಜನಗಳ ಕುರಿತು ಮನವರಿಕೆ ಮಾಡಿದರು.

ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಮತ್ತೊಬ್ಬ ಸದಸ್ಯರಾದ ರವೀಂದ್ರ ಬಳಿಗಾರ, ವಿಶ್ವನಾಥ ಪಾಟೀಲ, ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಚನ್ನವೀರ ಮುಂಗುರವಾಡಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net