ನಮ್ಮ ಮೆಟ್ರೋದಲ್ಲಿ ಸಂಸದರಿಬ್ಬರ ಪಯಣ; ಪ್ರಯಾಣಿಕರ ಅಹವಾಲು ಆಲಿಸಿದ ಜನಪ್ರತಿನಿಧಿಗಳು

Namma Metro
Published on

ಬೆಂಗಳೂರು: ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್​ ಹಾಗೂ ದಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನೇರಳೆ ಮಾರ್ಗದ ಕೆ.ಆರ್​.ಪುರ ನಿಲ್ದಾಣದಿಂದ ಇಂಟರ್​ಚೇಂಜ್​ ನಿಲ್ದಾಣವಾದ ನಾಡಪ್ರಭು ಕೆಂಪೇಗೌಡ (ಮೆಜಸ್ಟಿಕ್​) ನಿಲ್ದಾಣದವರೆಗೆ ಸೋಮವಾರ ಮೆಟ್ರೋ ರೈಲಿನಲ್ಲಿ ಸಂಚರಿಸಿದರು. ಸಂಜೆಯ ಪೀಕ್​ ಅವರ್​ನಲ್ಲಿ ಸಂಚರಿಸಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು.

ಮೆಜಸ್ಟಿಕ್​ ನಿಲ್ದಾಣದಲ್ಲಿ ಸಂಸದರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮ್ಮ ಮೆಟ್ರೋ ರಾಜಧಾನಿಯ ಪ್ರಮುಖ ಸಾರಿಗೆ ಸಂಪರ್ಕವಾಗಿದೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಪೀಕ್​ ಅವರ್​ನಲ್ಲಿ ದಟ್ಟಣೆ ಉಂಟಾಗುತ್ತಿದೆ. ಅದರಲ್ಲೂ ಐಟಿ ಕಾರಿಡಾರ್​ ಹಾಗೂ ಮೆಜೆಸ್ಟಿಕ್​ ನಿಲ್ದಾಣಗಳ ನಡುವೆ ಜನದಟ್ಟಣೆ ಕಂಡುಬಂದಿದೆ. ಜತೆಗೆ ಆಗಾಗ್ಗೆ ಅಡೆತಡೆಗಳು ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ರೈಲಿನಲ್ಲಿ ಪ್ರಯಾಣಿಸಿ ಆ ಸಮಸ್ಯೆಗಳನ್ನು ಆಲಿಸಿದ್ದೇವೆ. ಅವುಗಳನ್ನು ಬಿಎಂಆರ್​ಸಿಎಲ್​ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸದ್ಯ 18 ಸೆಟ್​ಗಳ ರೈಲುಗಳಿಂದ ಶಾರ್ಟ್​ ಲೂಪ್​ ಸೇವೆ ನಡೆಯುತ್ತಿದೆ. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪಟ್ಟಂದೂರು ಅಗ್ರಹಾರದ ವರೆಗೆ ಶಾರ್ಟ್​ಲೂಪ್​ ಸೇವೆಯನ್ನು ವಿಸ್ತರಿಸುವ ಸಾಧ್ಯತೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಜತೆಗೆ ಮಹಾತ್ಮ ಗಾಂಧಿ ರಸ್ತೆ ಹಾಗೂ ಮೆಜೆಸ್ಟಿಕ್​ ನಿಲ್ದಾಣಗಳ ನಡುವೆ ಶಾರ್ಟ್​ ಲೂಪ್​ ಸೇವೆ ಹೆಚ್ಚಿಸಲು ಸೂಚಿಸಿದ್ದೇವೆ ಎಂದರು.

3 ನಿಮಿಷಕ್ಕೊಂದು ರೈಲು ಸಂಚಾರ?

ನಮ್ಮ ಮೆಟ್ರೋಗೆ 21 ಸೆಟ್​ ರೈಲುಗಳನ್ನು ಪೂರೈಸಲು ಚೀನಾ ರೈಲ್ವೆ ರೋಲಿಂಗ್​ ಸ್ಟಾಕ್​ ಕಾಪೋರ್ರೇಷನ್​ಗೆ (ಸಿಆರ್​ಆರ್​ಸಿ) ಈಗಾಗಲೇ ಗುತ್ತಿಗೆ ಪಡೆದುಕೊಂಡಿದೆ. ಕಾರಣಾಂತರದಿಂದ ಪೂರೈಕೆಯಲ್ಲಿ ತಡವಾಗುತ್ತಿದೆ. ಹೀಗಾಗಿ ಬಿಎಂಆರ್​ಸಿಎಲ್​ ಅಧಿಕಾರಿಗಳು ಮುಂದಿನ ವಾರ ಕೇಂದ್ರ ಸರ್ಕಾರದ ಜತೆಗೆ ಚರ್ಚಿಸಲಿದ್ದಾರೆ. ಜೂನ್​ 2025ರಿಂದ ಪ್ರತಿ ತಿಂಗಳು ಮೂರು ರೈಲುಗಳ ಸೆಟ್​ ಸಿಆರ್​ಆರ್​ಸಿ ಇಂದ ಪೂರೈಕೆಯಾಗಲಿದೆ. ಇದರಿಂದ 2026ರ ಒಳಗಾಗಿ ಶೇ.40ಕ್ಕಿಂತ ಹೆಚ್ಚು ಜನರಿಗೆ ಪ್ರಯಾಣಿಸಲು ಅವಕಾಶ ಸಿಗುತ್ತದೆ. ಜತೆಗೆ ಪೀಕ್​ ಅವರ್​ನಲ್ಲಿ 3 ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಎಸ್​ಡಿ ದ್ವಾರಗಳನ್ನು ಅಳವಡಿಕೆಗೆ ಸೂಚನೆ

ಪ್ರಯಾಣಿಕರ ಸುರಕ್ಷತೆಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ನಿಲ್ದಾಣಗಳಲ್ಲಿ ಪಿಎಸ್​ಡಿ ದ್ವಾರಗಳನ್ನು ಅಳವಡಿಸಲು ಸಾಧ್ಯವಿದೆ. ಕಾರ್ಯಾಚರಿಸುತ್ತಿರುವ ಹಸಿರು ಹಾಗೂ ನೇರಳೆ ಮಾರ್ಗದ ನಿಲ್ದಾಣಗಳಲ್ಲಿ ಅಳವಡಿಸಲು ತಾಂತ್ರಿಕ ಸಮಸ್ಯೆಗಳಿವೆ. ಈ ಬಗ್ಗೆ ಬೇರೆ ಬೇರೆ ಮಾದರಿಗಳನ್ನು ಪರಿಶೀಲಿಸಿ ತಜ್ಞರ ತಂಡ ಅಧ್ಯಯನ ನಡೆಸುತ್ತಿದೆ. ಮೆಜೆಸ್ಟಿಕ್​ ನಿಲ್ದಾಣದಿಂದ ದ್ವಾರ ಅಳವಡಿಸಲು ಆರಂಭಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಭರಿಸಲು ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಬನಶಂಕರಿ ಮೆಟ್ರೋ ನಿಲ್ದಾಣದಿಂದ ಬಿಎಂಟಿಸಿ ಬಸ್​ ನಿಲ್ದಾಣದ ಮಧ್ಯದಲ್ಲಿ ಜನರಿಗೆ ಓಡಾಡಲು ಕಷ್ಟವಾಗುತ್ತಿದೆ. ಇಲ್ಲಿ ಸ್ಕೆ$ವಾಕ್​ ಹಾಗೂ ಟ್ರಾವೆಲೇಟರ್​ ಅಳವಡಿಸಲು ಬಿಬಿಎಂಪಿ ಕಳೆದ ಬಜೆಟ್​ನಲ್ಲಿ 50 ಕೋಟಿ ರೂ. ಮೀಸಲಿಟ್ಟಿದೆ. ಕಾಮಗಾರಿ ಇನ್ನೂ ಆರಂಭವಾಗದ ಕಾರಣ ಬಿಎಂಆರ್​ಸಿಎಲ್​ ಸಹಯೋಗದಲ್ಲಿ ಸ್ಕೈವಾಕ್​ ನಿರ್ಮಿಸುವ ಬಗ್ಗೆ ಚರ್ಚೆ ನಡೆದಿದೆ.

-ತೇಜಸ್ವಿ ಸೂರ್ಯ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net