

ಬೆಂಗಳೂರು: ಕೌಟುಂಬಿಕ ಕಲಹದಿಂದ ರೋಸಿಹೋದ ಸಾಫ್ಟ್ವೇರ್ ಉದ್ಯೋಗಿ ನಗರದಲ್ಲಿ ಪತ್ನಿಯನ್ನು ಹತ್ಯೆ ಮಾಡಿ, ಕೋಲ್ಕತಾಗೆ ತೆರಳಿ ಅಲ್ಲಿ ಅತ್ತೆಯನ್ನು ಗುಂಡಿಟ್ಟು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೋಲ್ಕತಾ ಮೂಲದ ಶಿಲ್ಪಿ (40) ಹಾಗೂ ಆಕೆಯ ತಾಯಿ ಲಲಿತಾ ದಂಧಾನಿಯಾ (70) ಕೊಲೆಯಾದವರು. ಕೃತ್ಯ ಎಸಗಿದ ಬಳಿಕ ಶಿಲ್ಪಿ ಪತಿ ಅಮಿತ್ ಅಗರ್ವಾಲ್ (42) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹದೇವಪುರದ ಸಮೀಪದ ಮೆಟ್ರೋ ಪೊಲಿಸ್ ಅಪಾರ್ಟ್ ಮೆಂಟ್ನಲ್ಲಿ ವಾಸಿಸುತ್ತಿದ್ದ ಅಮಿತ್, ಶನಿವಾರ (ಜೂ.20) ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಕೋಲ್ಕತಾಗೆ ತೆರಳಿದ್ದ. ಅಲ್ಲಿ ಅತ್ತೆ ಜತೆಗೂ ಜಗಳವಾಡಿ ಆಕೆಯನ್ನು ಗುಂಡಿಟ್ಟು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
10 ವರ್ಷಗಳ ಹಿಂದೆ ಶಿಲ್ಪಿ ಜತೆ ಅಮಿತ್ ವಿವಾಹವಾಗಿದ್ದು, ನಗರದ ಸಾಫ್ಟ್ವೇರ್ ಕಂಪನಿಯಲ್ಲಿ ದಂಪತಿ ಉದ್ಯೋಗದಲ್ಲಿದ್ದರು. ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಇತ್ತೀಚೆಗೆ ಜಗಳವಾಗುತ್ತಿತ್ತು. ಶನಿವಾರ ರಾತ್ರಿ ಕೂಡ ದಂಪತಿ ನಡುವೆ ಗಲಾಟೆಯಾದಾಗ ಅಮಿತ್ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೋಲ್ಕತಾದಲ್ಲಿನ ಮಾವನ ಮನೆಗೆ ಸೋಮವಾರ ಸಂಜೆ ತೆರಳಿದ ಅಮಿತ್, ಅತ್ತೆ-ಮಾವನ ಜತೆ ಗಲಾಟೆ ಮಾಡಿದ್ದಾನೆ. ಈ ವೇಳೆ ಕೋಪಗೊಂಡ ಅಮಿತ್, ಅತ್ತೆ ಮೇಲೆ ಗುಂಡು ಹಾರಿಸಿ ಕೊಂದು ಅಲ್ಲಿಂದ ಪರಾರಿಯಾಗಿದ್ದ. ನಂತರ ತಾನೂ ಗುಂಡಿಕ್ಕಿಕೊಂಡಿದ್ದಾನೆ.
ಕೋಲ್ಕತಾ ಪೊಲೀಸರು ತನಿಖೆ ನಡೆಸಿದಾಗ ಅಮಿತ್ ಬ್ಯಾಗ್ನಲ್ಲಿ ಮರಣಪತ್ರ ಪತ್ತೆಯಾಗಿದೆ. ಅದರಲ್ಲಿ ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದಿರುವುದಾಗಿ ಉಲ್ಲೇಖಿಸಿದ್ದ. ಕೂಡಲೇ ಕೋಲ್ಕತಾ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹದೇವಪುರ ಪೊಲೀಸರು, ರಾತ್ರಿ ಮೆಟ್ರೋ ಪೊಲಿಸ್ ಅಪಾರ್ಟ್ವೆುಂಟ್ಗೆ ತೆರಳಿ ಪರಿಶೀಲಿಸಿದಾಗ ಶಿಲ್ಪಿ ಶವ ಪತ್ತೆಯಾಗಿದೆ.