ಬೆಂಗಳೂರು - ಜಪಾನ್​​​ನ ನಗೋಯಾ ಆರ್ಥಿಕ ವಿನಿಮಯಕ್ಕೆ ಒಡಂಬಡಿಕೆ

bbmp japan
Published on

ಬೆಂಗಳೂರು: ಬೆಂಗಳೂರು ನಗರ ಮತ್ತು ಜಪಾನ್ ದೇಶದ ನಗೋಯಾ ನಗರಗಳ ಮಧ್ಯೆ ಆರ್ಥಿಕ ವಿನಿಮಯ ಉತ್ತೇಜಿಸಲು ಎರಡೂ ನಗರಗಳ ಪ್ರಮುಖರ ಸಮ್ಮುಖ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ವಿಕಾಸಸೌಧದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಗೋಯಾ ಮೇಯರ್ ಇಚಿರೋ ಹಿರೊಸಾವಾ ಮತ್ತು ಬಿಬಿಎಂಪಿಯ ಆಡಳಿತಾಧಿಕಾರಿಯೂ ಆದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ತುಷಾರ್ ಗಿರಿನಾಥ್ ಪರಸ್ಪರ ಸಹಿಹಾಕುವ ಮೂಲಕ ಜಂಟಿ ಉದ್ದೇಶ ಘೋಷಣೆ ಮಾಡಿಕೊಳ್ಳಲಾಯಿತು.

ಎರಡೂ ನಗರಗಳ ನಡುವಿನ ‘ಸಿಸ್ಟರ್ ಕನ್ಸರ್ನ್’ ಸಂಬಂಧವನ್ನು ಮತ್ತಷ್ಟು ಉತ್ತೇಜಿಸಲು ಮೂರು ಅಂಶಗಳಿಗೆ ಒತ್ತು ನೀಡಲು ನಿರ್ಧರಿಸಲಾಯಿತು.

ಎರಡೂ ನಗರಗಳ ನಡುವೆ ಆರ್ಥಿಕ ವಿನಿಮಯ ಉತ್ತೇಜನಕ್ಕೆ ತಮ್ಮ ತಮ್ಮ ಪ್ರದೇಶಗಳ ಕೈಗಾರಿಕಾ ಪ್ರವೃತ್ತಿ ಕುರಿತು ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವುದು ಮತ್ತು ಆ ಮಾಹಿತಿಯನ್ನು ವ್ಯಾಪಾರ ಸಂಸ್ಥೆಗಳು, ಇತರ ಸಂಬಂಧಿತ ಘಟಕಗಳಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಎರಡೂ ನಗರಗಳು ಉದ್ಯಮಿ, ವ್ಯಾಪಾರ ಸಂಸ್ಥೆಗಳನ್ನು ತಮ್ಮ ವ್ಯವಹಾರ ವಿಸ್ತರಣೆಗೆ ಪ್ರೋತ್ಸಾಹಿಸಲಾಗುತ್ತದೆ. ಜತೆಗೆ ವಿಶ್ವವಿದ್ಯಾಲಯಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ಸಹಕರಿಸುವ ಮೂಲಕ ಮಾನವ ಸಂಪನ್ಮೂಲ ವಿನಿಮಯ ಮಾಡಿಕೊಳ್ಳಲು ಒಡಂಬಡಿಕೆ ಆಗಿದೆ.

ಈ ವೇಳೆ ಎಸಿಎಸ್ ತುಷಾರ್ ಗಿರಿನಾಥ್ ಮಾತನಾಡಿ, ನಗೋಯಾ ನಗರವು ಸುಂದರವಾದ ಸ್ಥಳವಾಗಿದೆ. ಅಲ್ಲಿನ ಸಂಸ್ಥೆಗಳು ಹೆಚ್ಚಾಗಿ ಬೆಂಗಳೂರು ನಗರಕ್ಕೆ ಬರಬೇಕೆಂದು ಇಚ್ಛಿಸುತ್ತೇನೆ ಎಂದು ಆಶಿಸಿದರು.

ನಗೋಯಾದ ಮೇಯರ್ ಇಚಿರೋ ಹಿರೊಸಾವಾ ಮಾತನಾಡಿ, ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ಸಂಸ್ಥೆಗಳಿದ್ದು, ಎರಡೂ ನಗರಗಳ ಮಧ್ಯೆ ಆರ್ಥಿಕ ವಿನಿಮಯವನ್ನು ಉತ್ತೇಜಿಸಲಿದೆ. ಬಿಬಿಎಂಪಿಯ ಜತೆ ಜಂಟಿ ಉದ್ದೇಶ ಘೋಷಣೆ ಮಾಡಿಕೊಳ್ಳುತ್ತಿರುವುದು ಸಂತಸದ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರಾದ ಕೆ.ಹರೀಶ್ ಕುಮಾರ್, ಕರೀಗೌಡ, ಪ್ರೀತಿ ಗೆಹ್ಲೋಟ್, ಜಪಾನ್‌ನ ನಗೋಯಾ ನಗರದ ಪ್ರತಿನಿಧಿಗಳು, ಬಿಸಿಐಸಿ ಪ್ರತಿನಿಧಿಗಳು ಹಾಜರಿದ್ದರು.

ಬಿಬಿಎಂಪಿ ಜತೆ ನಗೋಯಾ ಜಂಟಿ ಉದ್ದೇಶ ಘೋಷಣೆ ಮಾಡಿಕೊಂಡಿರುವುದು ವ್ಯಾಪಾರ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡಲಿದೆ. ಇದರಿಂದ ಜಪಾನ್‌ನ ಸಾಕಷ್ಟು ಸಂಸ್ಥೆಗಳು ಬೆಂಗಳೂರು ನಗರಕ್ಕೆ ಆಗಮಿಸಿ ವಹಿವಾಟು ನಡೆಸಲು ಸಹಕಾರಿಯಾಗಲಿದೆ.

- ಎಂ.ಮಹೇಶ್ವರ್ ರಾವ್, ಬಿಬಿಎಂಪಿ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net