ರಾಜಧಾನಿಯಲ್ಲಿ ಸಮುದಾಯ ಸೋಂಕು ಭಯ: ವಾರದಲ್ಲಿ ಶೇ.28 ಪ್ರಕರಣಗಳ ಮೂಲವೇ ತಿಳಿದಿಲ್ಲ

06062020 Koppal Corona Positive Case
Published on

ಬೆಂಗಳೂರು: ರಾಜಧಾನಿಯಲ್ಲಿ ಕರೊನಾ ನಿಯಂತ್ರಣ ಉತ್ತಮವಾಗಿ ನಡೆಯುತ್ತಿದೆ ಎಂಬ ಮಾತಿನ ನಡುವೆಯೇ, ಯಾವುದೇ ಸಂಪರ್ಕ ವಿಲ್ಲದವರಿಗೂ ಸೋಂಕು ಹರಡುವ ಪ್ರಮಾಣ ಎಂಟು ಪಟ್ಟು ಹೆಚ್ಚಿದೆ. ದೇವರಜೀವನಹಳ್ಳಿ, ರಾಗಿಗುಡ್ಡ ಕೊಳೆಗೇರಿ ಯಂಥ ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುವವರು, ಕೂಲಿ ಕಾರ್ವಿುಕರಿಗೆ ಸೋಂಕು ತಗಲುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ.

ಕಳೆದೊಂದು ವಾರದಿಂದ ರಾಜ್ಯದಲ್ಲಿ ದಾಖಲಾಗುವ ಶೇ.97 ಪ್ರಕರಣಗಳು ಯಾವುದಾದರೂ ಸಂಪರ್ಕವನ್ನು ಹೊಂದಿವೆ. ಅವುಗಳಲ್ಲಿ ಬಹಳಷ್ಟು ಮಂದಿ ಸೋಂಕಿತರು ಮಹಾ ರಾಷ್ಟ್ರದಿಂದ ಬಂದವರಿಂದ ಪ್ರಾಥಮಿಕ ಸಂರ್ಪತರು. ವಾರದಲ್ಲಿ ದಾಖಲಾದ ಒಟ್ಟು 2,482 ಪ್ರಕರಣಗಳಲ್ಲಿ 92 ಪ್ರಕರಣ ಮಾತ್ರ ಯಾವುದೇ ಸೋಂಕು ಇಲ್ಲದವರು. ಅಂದರೆ ಒಟ್ಟು ಸೋಂಕಿತರಲ್ಲಿ ಶೇ.3.7 ಜನರು ಯಾವುದೇ ಪ್ರವಾಸ ಇತಿಹಾಸ, ಸೋಂಕಿತರ ಸಂಪರ್ಕ ಹೊಂದಿಲ್ಲ.

ಇದೇ ವಾರದಲ್ಲಿ ಬೆಂಗಳೂರಿನಲ್ಲಿ ಒಟ್ಟು 118 ಪ್ರಕರಣಗಳು ಬಯಲಿಗೆ ಬಂದಿವೆ. ಅವುಗಳಲ್ಲಿ 84 ಪ್ರಕರಣಗಳಿಗೆ ಪ್ರವಾಸ ಇತಿಹಾಸ ಅಥವಾ ಸೋಂಕಿತರೊಂದಿಗೆ ಸಂಪರ್ಕ ಇದೆ. ಇನ್ನುಳಿದ 34, ಅಂದರೆ ಶೇ.28.8 ಪ್ರಕರಣಗಳಿಗೆ ಯಾವ ಪ್ರಯಾಣದ ಇತಿಹಾಸವೂ ಇಲ್ಲ. ಇನ್​ಫ್ಲೂಯೆಂಜಾ ರೀತಿಯ ಅನಾರೋಗ್ಯ, ತೀವ್ರ ಉಸಿರಾಟದ ತೊಂದರೆ ಎಂದು ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ಹೋದ 12 ಮಂದಿಗೆ ಸೋಂಕು! ಕಳೆದೊಂದು ವಾರದಲ್ಲಿ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳಿದ 12 ಜನರಲ್ಲಿ ಕರೊನಾ ದೃಢಪಟ್ಟಿದೆ. ಮೇ 31ರಿಂದ ಹೊರಬಂದ ಫಲಿತಾಂಶಗಳ ಆಧಾರದಲ್ಲಿ ಬೆಂಗಳೂರಿನಿಂದ ಮಂಡ್ಯ, ರಾಯಚೂರು, ಧಾರವಾಡ, ಕೋಲಾರ ಹಾಗೂ ಗದಗಕ್ಕೆ ತೆರಳಿದ್ದ ತಲಾ ಒಬ್ಬರು ಹಾಗೂ ಶಿವಮೊಗ್ಗಕ್ಕೆ ತೆರಳಿದ 7 ಜನರಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಿಂದ ತೆರಳಿದವರನ್ನು ಗಡಿ ಭಾಗದಲ್ಲೇ ಕ್ವಾರಂಟೈನ್ ಮಾಡಿ ತಪಾಸಣೆ ನಡೆಸಬೇಕಾದ ಅನಿವಾರ್ಯತೆಯನ್ನು ಇದು ಸೂಚಿಸುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ 18 ಹೊಸ ಪ್ರಕರಣ: ಪ್ರತಿಷ್ಠಿತ ಉದ್ದಿಮೆ ಸಂಸ್ಥೆಯ ಮಾರಾಟ ಮಳಿಗೆಗಳಿಗೆ ಕೊಂಡೊಯ್ಯಲು ಸರಕನ್ನು ಲಾರಿಗೆ ಲೋಡ್ ಹಾಗೂ ಅನ್​ಲೋಡ್ ಮಾಡುವ ನಾಲ್ವರು ಕಾರ್ವಿುಕರೂ ಸೇರಿ ಬೆಂಗಳೂರಿನಲ್ಲಿ ಶನಿವಾರ 18 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಮಾದನಾಯಕನಹಳ್ಳಿಯ ಸಿದ್ಧನಹೊಸಹಳ್ಳಿ ಪ್ರದೇಶದಲ್ಲಿರುವ ನಾಲ್ವರು ಕಾರ್ವಿುಕರು ಒಟ್ಟಿಗೇ ಕೆಲಸ ಮಾಡುತ್ತಿದ್ದರು. ಕಳೆದ ವಾರ ಮಹಾರಾಷ್ಟ್ರದ ಲಾರಿಯೊಂದಕ್ಕೆ ಸರಕನ್ನು ಲೋಡ್ ಮಾಡಿದ್ದನ್ನು ಹೊರತುಪಡಿಸಿ ಯಾವುದೇ ಪ್ರವಾಸ ಇತಿಹಾಸ, ಸಂಪರ್ಕ ಹೊಂದಿರುವುದು ಕಂಡು ಬಂದಿಲ್ಲ. ಜ್ವರದಿಂದಾಗಿ ಮೊದಲಿಗೆ ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ನಂತರ ರಂಗದೊರೆ ಆಸ್ಪತ್ರೆಯಲ್ಲಿ ಕರೊನಾ ಪರೀಕ್ಷೆಗೆ ಒಳಗಾಗಿದ್ದರು. 45 ವರ್ಷದ ದಾಸರಹಳ್ಳಿಯ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಇವರಿಗೆ ಯಾವುದೇ ಪ್ರವಾಸ ಇತಿಹಾಸ ಇಲ್ಲ. ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದಾಗ ಪರೀಕ್ಷೆ ನಡೆಸಿದಾಗ ಸೋಂಕು ದೃಢವಾಗಿದೆ.

29 ವರ್ಷದ ಪೀಣ್ಯ ಮಹಿಳೆಗೆ ಸೋಂಕು ದೃಢಪಟ್ಟಿದೆ. ಪ್ರತಿಷ್ಠಿತ ಸಾಫ್ಟ್​ವೇರ್ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ 2 ತಿಂಗಳಿಂದ ಮನೆಯಲ್ಲೇ ಇದ್ದರು. ತೀವ್ರ ಉಸಿರಾಟದ ತೊಂದರೆ ಎಂಬ ಕಾರಣಕ್ಕೆ ಪೀಣ್ಯದ ಆಸ್ಪತ್ರೆಯಲ್ಲಿ ಮೊದಲಿಗೆ ಪರೀಕ್ಷೆ ನಡೆಸಿ ನಂತರ, ರಾಜಾಜಿನಗರದ ಇಎಸ್​ಐನಲ್ಲಿ ಪರೀಕ್ಷೆಗೊಳಪಡಿಸಿದಾಗ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಹಿಂದಿರುಗಿದ 27 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.

ಇನ್ನು, 4 ವರ್ಷದ ಗಂಡು ಮಗು ಜತೆಗೆ 47 ವರ್ಷದ ಮಹಿಳೆ, 67 ವರ್ಷದ ವೃದ್ಧರಿಗೆ ಸೋಂಕು ಪತ್ತೆಯಾಗಿದೆ. ಯಾವುದೇ ಪ್ರವಾಸ ಇತಿಹಾಸ ಹೊಂದಿಲ್ಲದ ಮೂವರೂ ಇನ್​ಫ್ಲೂಯೆಂಜಾ ರೀತಿಯ ಅನಾರೋಗ್ಯದ (ಐಎಲ್​ಐ) ಕಾರಣಕ್ಕೆ ಪರೀಕ್ಷೆಗೊಳಪಟ್ಟಾಗ ಸೋಂಕು ದೃಢವಾಗಿದೆ. ಮೂವರು ಮಹಿಳೆ ಹಾಗೂ ನಾಲ್ವರು ಪುರುಷರಲ್ಲಿ ಸೋಂಕು ಹೇಗೆ ಬಂತು ಎಂಬುದು ಇನ್ನೂ ಪತ್ತೆಯಾಗಿಲ್ಲ. ಮೇ 28ಕ್ಕೆ ಸಾರಿ ಎಂದು ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದ್ದವರೊಂದಿಗೆ (ಪಿ-2,519) ಸಂಪರ್ಕಕ್ಕೆ ಬಂದಿದ್ದ ಸೋಂಕಿತರ (3,270) ಮೂಲಕ 45 ವರ್ಷದ ಮಹಿಳೆಗೆ (4,859) ಸೋಂಕು ದೃಢಪಟ್ಟಿದೆ. ತಮಿಳುನಾಡಿನಿಂದ 60 ವರ್ಷದ ಸೋಂಕಿತರೊಂದಿಗೆ (2,334) ಸಂಪರ್ಕ ಹೊಂದಿದ್ದ 45 ವರ್ಷದ ಮಹಿಳೆಗೆ (ಪಿ-4,852) ಸೋಂಕು ಖಾತ್ರಿ ಯಾಗಿದೆ. ಎಲ್ಲ ಸೋಂಕಿತರ ಸಂಪರ್ಕಗಳನ್ನೂ ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net