ಮುಂಗಾರು ಆಗಮನ ರಾಜಧಾನಿ ತಲ್ಲಣ! 15 ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್

Untitled design (8)
Published on

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯಕ್ಕೆ ನೈಋತ್ಯ ಮುಂಗಾರು ಭಾನುವಾರ ಅಧಿಕೃತವಾಗಿ ಪ್ರವೇಶಿಸಿದೆ. ವಾಡಿಕೆಗೂ ಮುನ್ನ ಕೇರಳಕ್ಕೆ ಕಾಲಿಟ್ಟು, 3 ದಿನದ ಬಳಿಕ ರಾಜ್ಯದ ಕರಾವಳಿ ಭಾಗಕ್ಕೆ ಆಗಮಿಸಿದೆ. ಮಾನ್ಸೂನ್ ಚಿತ್ರದುರ್ಗವರೆಗೆ ಆವರಿಸಿದ್ದು, ಜೂ.10ರೊಳಗೆ ರಾಜ್ಯಾದ್ಯಂತ ವ್ಯಾಪಿಸುವ ಸಾಧ್ಯತೆ ಇದೆ.

ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಮಂಡ್ಯ, ರಾಮನಗರ, ಹಾಸನ, ಮೈಸೂರು, ಬೀದರ್ ಸೇರಿ ರಾಜ್ಯದ ಹಲವೆಡೆ ಭರ್ಜರಿ ವರ್ಷಧಾರೆಯಾಗಿದೆ. ಧಾರಾಕಾರ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿದೆ. ಬೆಂಗಳೂರಿನಲ್ಲಿ ಸತತ 2 ದಿನವೂ ವರುಣಾರ್ಭಟ ಮುಂದುವರಿದಿದ್ದು, 3 ಗಂಟೆಗಳಲ್ಲಿ ಅವಧಿಯಲ್ಲಿ 100 ಮಿ.ಮೀ ಮಳೆಯಾಗಿದೆ. ಕೆಲವು ಕಡೆ ಅಂಡರ್ ಪಾಸ್​ಗಳಲ್ಲಿ ಬಸ್, ವಾಹನಗಳು ಸಿಲುಕಿ ಸವಾರರು ಪರದಾಡಿದರು. ಸಂಜೆ 5.30ಕ್ಕೆ ಶುರುವಾದ ಬಿರುಗಾಳಿ, ಗುಡುಗು ಮಿಂಚು ಸಹಿತ ಮಳೆಯು ರಾತ್ರಿ 8 ಗಂಟೆವರೆಗೆ ಸುರಿಯಿತು. ಭಾರೀ ಮಳೆಗೆ ನೂರಾರು ಮರಗಳು ಧರೆಗುರುಳಿವೆ.

ಕಳೆದ ವರ್ಷ ಮಳೆ ಕೊರತೆ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಮೂರ್ನಾಲ್ಕು ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿರುವ ಕಾರಣ 2020 ಮತ್ತು 2022ರ ಜೂನ್​ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿತ್ತು. ಈ ಬಾರಿ ರಾಜ್ಯದಲ್ಲಿ ಮುಂಗಾರು ಆಶಾದಾಯಕವಾಗಿದೆ. ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಲಿದೆ. ಜುಲೈನಿಂದ ಮಳೆ ಹೆಚ್ಚಾಗುವ ಸಾಧ್ಯತೆ ಇದೆ.

ಭಾರಿ ವರ್ಷಧಾರೆ: ಮಂಡ್ಯ, ಮೈಸೂರು, ಹಾಸನದಲ್ಲಿ ಸೋಮವಾರದಿಂದ ಜೂ.7ರವರೆಗೆ, ದ.ಕನ್ನಡ, ಬಾಗಲಕೋಟೆ, ಉಡುಪಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರಿನಲ್ಲಿ ಮುಂದಿನ 24 ಗಂಟೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಮಂಗಳವಾರ (ಜೂ.4) ಯೆಲ್ಲೋ ಅಲರ್ಟ್ ಇರಲಿದೆ. ಉಳಿದೆಡೆ ಗುಡುಗು ಮಿಂಚು ಸಹಿತ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net