

ಶಿವಮೊಗ್ಗ: ಬೆಂಗಳೂರಿನ ಗುತ್ತಿಗೆದಾರನಿಗೆ ಶಿವಮೊಗ್ಗದ ವ್ಯಕ್ತಿಯೊಬ್ಬ ಹಳೇ ಕಾಲದ ಬಂಗಾರದ ನಾಣ್ಯಗಳೆಂದು ನಂಬಿಸಿ ನಕಲಿ ಚಿನ್ನ ನೀಡಿ 11 ಲಕ್ಷ ರೂ. ವಂಚಿಸಿದ್ದಾನೆ.
ಬೆಂಗಳೂರಿನ ಎಸ್.ಗೌತಮ್ ಭಂಡಾರಿ ವಂಚನೆಗೆ ಒಳಗಾದವರು. ಅವರಿಗೆ ಶಿವಮೊಗ್ಗದ ಪ್ರದೀಪ್ ಎಂಬಾತ ನಕಲಿ ಚಿನ್ನ ನೀಡಿ ವಂಚಿಸಿರುವ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಗೌತಮ್ಗೆ ಟ್ಯಾಕ್ಸಿಯಲ್ಲಿ ತೆರಳುವಾಗ ಶಿವಮೊಗ್ಗದ ಪ್ರದೀಪ್‌ನ ಪರಿಚಯವಾಗಿತ್ತು. ಗುತ್ತಿಗೆದಾರನಾಗಿರುವ ಗೌತಮ್ಗೆ ಶಿವಮೊಗ್ಗಕ್ಕೆ ಬಂದರೆ ಫೋನ್ ಮಾಡಿ ಒಳ್ಳೆಯ ಪ್ರವಾಸಿ ತಾಣಗಳನ್ನು ತೋರಿಸುವುದಾಗಿ ಪ್ರದೀಪ್ ಹೇಳಿದ್ದ. ಹಾಗಾಗಿ ಇಬ್ಬರೂ ಮೊಬೈಲ್ ನಂಬರ್‌ಗಳನ್ನು ಹಂಚಿಕೊಂಡಿದ್ದರು.
ಕೆಲಸದ ನಿಮಿತ್ತ ಮತ್ತೆ ಶಿವಮೊಗ್ಗ-ಸಾಗರ ರಸ್ತೆಯ ಶ್ರೀರಾಂಪುರಕ್ಕೆ ಗೌತಮ್ ಬಂದಿದ್ದು, ಪ್ರದೀಪ್‌ಗೆ ಫೋನ್ ಮಾಡಿದ್ದರು. ಈ ವೇಳೆ ವಸಂತ್, ಕೊಳ್ಳಿ ರಘು, ಮುದ್ದಪ್ಪ ಎಂಬುವರನ್ನು ಪ್ರದೀಪ್ ಪರಿಚಯಿಸಿದ್ದ. ಮುದ್ದಪ್ಪನ ತಂಗಿಗೆ ಮದುವೆ ನಿಶ್ಚಯವಾಗಿದೆ. ಆದರೆ ಹಣದ ಅವಶ್ಯಕತೆ ಇದೆ. ಅವರ ಬಳಿ ಇರುವ ಹಳೇ ಕಾಲದ 250 ಗ್ರಾಂ ಬಂಗಾರದ ನಾಣ್ಯಗಳನ್ನು ಪಡೆದು 11 ಲಕ್ಷ ರೂ. ನೀಡುವಂತೆ ಗೌತಮ್‌ಗೆ ಕೇಳಿಕೊಂಡಿದ್ದ.
ಅದಕ್ಕೆ ಗೌತಮ್ ಒಪ್ಪಿಕೊಂಡಿದ್ದು, ಮೊದಲು ಎರಡು ಅಸಲಿ ಚಿನ್ನದ ನಾಣ್ಯ ಕೊಟ್ಟು ಪರಿಶೀಲಿಸಿದ ನಂತರ ಉಳಿದ ಬಂಗಾರದ ನಾಣ್ಯಗಳನ್ನು ಕೊಂಡೊಯ್ಯುವಂತೆ ಪ್ರದೀಪ್ ಹೇಳಿದ್ದ. ಎರಡು ನಾಣ್ಯಗಳನ್ನು ಬೆಂಗಳೂರಿನಲ್ಲಿ ಪರಿಚಯವಿರುವ ಅಕ್ಕಸಾಲಿಗೆ ಗೌತಮ್ ತೋರಿಸಿದ್ದು ಅವು ಅಸಲಿ ಎಂದು ಅಕ್ಕಸಾಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗೌತಮ್ ಸ್ನೇಹಿತರಿಂದ ಹಣವನ್ನು ಸಾಲ ಪಡೆದು ಪ್ರದೀಪ್‌ಗೆ ಕೊಟ್ಟು 250 ಗ್ರಾಂ ಬಂಗಾರದ ನಾಣ್ಯ ತೆಗೆದುಕೊಂಡು ಹೋಗಿದ್ದರು.
ಬೆಂಗಳೂರಿನಲ್ಲಿ ಪರಿಶೀಲಿಸಿದಾಗ ಅವು ನಕಲಿ ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಂದ ಶಿವಮೊಗ್ಗಕ್ಕೆ ಬಂದು ಗೌತಮ್ ತುಂಗಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.