ಬೆಂಗಳೂರು ನಗರದಾದ್ಯಂತ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

cleaning work
Published on

ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲ್ಯುಎಂಎಲ್) ನಗರದಾದ್ಯಂತ ಸೋಮವಾರದಿಂದ ಸತತ 10 ದಿನ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದೆ. ನಗರದ ರಸ್ತೆ ಬದಿ, ಖಾಲಿ ಜಾಗಗಳಲ್ಲಿ ತ್ಯಾಜ್ಯ ಬಿಸಾಡುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತಿದೆ.

ತ್ಯಾಜ್ಯ ತೆರವುಗೊಳಿಸುವ ವಿಚಾರದಲ್ಲಿ ಗುತ್ತಿಗೆದಾರರು ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ ರಸ್ತೆ ಬದಿ ಕಸ ಬಿಸಾಡುವುದು ಹೆಚ್ಚಾಗಿದೆ. ಈ ಸಂಬಂಧ ಗುತ್ತಿಗೆದಾರರಿಗೆ ನೀಡುವ ಬಿಲ್​ನಲ್ಲಿಯೇ ಹಣವನ್ನು ಕಟಾವು ಮಾಡಿಕೊಂಡು ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆ ಆಯಾ ವಲಯಗಳಲ್ಲಿ ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು, ಮಾರ್ಷಲ್ ಮೇಲ್ವಿಚಾರಕರು ಹಾಗೂ ಮಾರ್ಷಲ್​​ಗಳ ನೇತೃತ್ವದಲ್ಲಿ ಕಸ ಬಿಸಾಡುವ ಸ್ಥಳ (ಬ್ಲಾಕ್ ಸ್ಪಾಟ್‌ಗಳಲ್ಲಿ ಆಟೋ ಟಿಪ್ಪರ್‌ಗಳನ್ನು ಬಳಸಿಕೊಂಡು ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ಕಸ ಬಿಸಾಡುವ ಸ್ಥಳಗಳನ್ನು ಸ್ವಚ್ಛತೆ ಮಾಡಿ, ಆ ಜಾಗದಲ್ಲಿ ರಂಗೋಲಿ ಬಿಡಿಸಿ ಹಸಿರು ಮೆಸ್ ಕಟ್ಟಿ ಸುಂದರೀಕರಣಗೊಳಿಸಲಾಗುತ್ತಿದೆ. ಜತೆಗೆ ಮತ್ತೆ ಆ ಜಾಗದಲ್ಲಿ ಕಸ ಬಿಸಾಡದಂತೆ ಬ್ಯಾನರ್ ಅಳವಡಿಸಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಕಟ್ಟಡ ಭಗ್ನಾವಶೇಷ ತೆರವು:

ನಗರದ ಕೆಲವೆಡೆ ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಕಟ್ಟಡ ಭಗ್ನಾವಶೇಷ ಸುರಿದಿರುವುದನ್ನು ಗುರುತಿಸಲಾಗಿದೆ. ಅಂತಹ ಸ್ಥಳಗಳಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ಜೆಸಿಬಿ ಯಂತ್ರಗಳು ಹಾಗೂ ಹೆಚ್ಚುರಿಯಾಗಿ ಕಾಪ್ಯಾಂಕ್ಟರ್‌ಗಳನ್ನು ಬಳಸಿಕೊಂಡು ತೆರವುಗೊಳಿಸಲಾಗುತ್ತಿದೆ. ಸ್ವಚ್ಛತಾ ಅಭಿಯಾನದಲ್ಲಿ ಅಧಿಕಾರಿಗಳೊಂದಿಗೆ ಕೆಲ ನಿವಾಸಿ ಕಲ್ಯಾಣ ಸಂಘಗಳು, ಅಪಾರ್ಟ್‌ಮೆಂಟ್ ಮಾಲಿಕರ ಸಂಘಗಳು ಕೈಜೋಡಿಸಿದ್ದವು ಎಂದು ನಿಗಮದ ಅಧಿಕಾರಿಗಳು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net