

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಬುಧವಾರ (ಜೂ. 11) ನಡೆಯಲಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಕೃಷಿಕನ ಮಗಳು, ವಾಚ್‌ಮನ್ ಮಗಳು ಹಾಗೂ 56ನೇ ವಯಸ್ಸಿನಲ್ಲಿಯೂ ಉತ್ಸಾಹದಿಂದ ಓದಿ ಚಿನ್ನದ ಪದಕ ಬಾಚಿಕೊಂಡಿರುವುದು ಈ ಬಾರಿಯ ವಿಶೇಷ.
ಬೆಳಗ್ಗೆ 11 ಗಂಟೆಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ. 57 ಚಿನ್ನದ ಪದಕ ಸೇರಿ 39 ಸಾವಿರ ವಿದ್ಯಾರ್ಥಿಗಳು ಪ್ರದವಿ ಪಡೆಯಲಿದ್ದಾರೆ. ಬಿಹಾರದ ಪಾಟ್ನಾದ ಹೈಕೋರ್ಟ್‌ನ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಪಾಲ್ಗೊಳ್ಳಲಿದ್ದಾರೆ ಎಂದು ಬೆಂ.ನಗರ ವಿವಿ ಕುಲಪತಿ (ಪ್ರಭಾರ) ಪ್ರೊ.ಕೆ.ಆರ್. ಜಲಜಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ವರ್ಷ ಪದವಿ 32,486 ಹಾಗೂ ಸ್ನಾತಕೋತ್ತರ ಪದವಿ 7,285 ವಿದ್ಯಾರ್ಥಿಗಳು, 9 ಪಿಎಚ್.ಡಿ. ಸೇರಿ 39,780 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಪದವಿಯಲ್ಲಿ 9 ಹಾಗೂ ಸ್ನಾತಕೋತ್ತರ ಪದವಿಯಲ್ಲಿ 48 ವಿದ್ಯಾರ್ಥಿಗಳು ಸೇರಿ 57 ವಿದ್ಯಾರ್ಥಿಗಳು ಬೆಂ. ನಗರ ವಿವಿ ಮತ್ತು ದಾನಿಗಳು ಸ್ಥಾಪಿಸಿರುವ ಸ್ಥಾಪಿಸಿರುವ 57 ಚಿನ್ನದ ಪದಕ ಸ್ವೀಕರಿಸಲಿದ್ದಾರೆ.
ಗೌರವ ಡಾಕ್ಟರೇಟ್ ಇಲ್ಲ:
ಬೆಂ.ನಗರ ವಿವಿ ಈ ವರ್ಷ ಗೌರವ ಡಾಕ್ಟರೇಟ್ ಪದವಿ ನೀಡುತ್ತಿಲ್ಲ. ಈ ವರ್ಷ ಬೆಂ.ನಗರ ವಿವಿಯು ಸಿಂಡಿಕೇಟ್ ಸಭೆಯಲ್ಲಿ ಅರ್ಹ ಕೆಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಅಂತಿಮವಾಗಿ ರಾಜ್ಯಪಾಲರು ಡಾಕ್ಟರೇಟ್ ಪದವಿ ನೀಡುವುದಕ್ಕೆ ಹಿಂದೇಟು ಹಾಕಿರುವುದು ಇದಕ್ಕೆ ಕಾರಣ. ಈ ಹಿಂದೆ ಕೂಡ ಇದೇ ರೀತಿ ರಾಜ್ಯಪಾಲರು ಗೌರವ ಡಾಕ್ಟರೇಡ್ ನೀಡದೆಯೇ ಘಟಿಕೋತ್ಸವ ನಡೆಸಿರುವ ಉದಾಹರಣೆಗಳಿವೆ.
ರಾಜ್ಯಪತ್ರದ ಅಧಿಸೂಚನೆ ಬಾಕಿ:
ಯಲಹಂಕದ ಬಳಿ ಬೆಂ.ನಗರ ವಿವಿ ಘಟಕ ಕಾಲೇಜು ಆರಂಭಿಸುವುದು ಹಾಗೂ ಸರ್ಕಾರಿ ಕಲಾ ಕಾಲೇಜು, ಆರ್.ಸಿ. ಕಾಲೇಜು ಎರಡನ್ನೂ ವಿವಿ ವ್ಯಾಪ್ತಿ ಪಡೆಯುವ ವಿಚಾರ ಇನ್ನೂ ಸರ್ಕಾರದ ಹಂತದಲ್ಲಿದೆ. ನಾವು ಕಾಲೇಜುಗಳನ್ನು ವಿವಿ ವ್ಯಾಪ್ತಿಗೆ ಕೇಳಿದ್ದೇವೆ. ಅಲ್ಲದೆ, ಘಟಕ ಕಾಲೇಜು ಆರಂಭಿಸುವುದಕ್ಕೂ ವಿವಿ ಸಿದ್ಧವಾಗಿದ್ದು, ಎಲ್ಲವೂ ರಾಜ್ಯಪತ್ರದಲ್ಲಿ ಪ್ರಕವಾಗಬೇಕಿದೆ ಎಂದು ಪ್ರೊ.ಕೆ.ಆರ್. ಜಲಜಾ ತಿಳಿಸಿದರು.
ಈ ವೇಳೆ ಬೆಂ.ನಗರ ವಿವಿ ಕುಲಸಚಿವ(ಮೌಲ್ಯಮಾಪನ) ಪ್ರೊ.ಬಿ. ರಮೇಶ್ ಉಪಸ್ಥಿತರಿದ್ದರು.
56ನೇ ವಯಸ್ಸಲ್ಲೂ ಸುವರ್ಣ ಸಂಭ್ರಮ
ಶೇಷಾದ್ರಿಪುರಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ಮನನ್ ಜೈನ್ ಮತ್ತು ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಆರ್.ಎಸ್. ಸಂಜನ ತಲಾ ಮೂರು ಚಿನ್ನದ ಪದಕವನ್ನು ಪಡೆಯಲು ಅರ್ಹರಾಗಿದ್ದಾರೆ.
ರ‌್ಯಾಂಕ್ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಚಿನ್ನದ ಪದಕ ಅನಿರೀಕ್ಷಿತವಾಗಿ ಬಂದಿರುವುದಕ್ಕೆ ಖುಷಿ ಮತ್ತು ಹೆಮ್ಮೆ ಎನಿಸುತ್ತಿದೆ. ಯಾವಾಗಲೂ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತೇನೆ. ಪುಸ್ತಕ ಓದುವುದು, ಆನ್‌ಲೈನ್ ಕಂಟೆಂಟ್‌ಗಳನ್ನು ವೀಕ್ಷಿಸುವುದು ನನ್ನ ಹವ್ಯಾಸ. ಪ್ರಸ್ತುತ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ತಂದೆ ಬಟ್ಟೆಗಳ ಸಗಟು ವ್ಯಾಪಾರಿಯಾಗಿದ್ದಾರೆ. -ಮನನ್ ಜೈನ್, ಬಿಬಿಎ 3 ಚಿನ್ನದ ಪದಕ, ಶೇಷಾದ್ರಿಪುರಂ ಕಾಲೇಜು
ನಾನು ಪದವಿಯಲ್ಲೂ ಹೆಚ್ಚಿನ ಅಂಕ ಗಳಿಸಿದ್ದೆ, ಸ್ನಾತಕೋತ್ತರ ಪದವಿಯಲ್ಲಿಯೂ ಹೆಚ್ಚಿನ ಅಂಕ ಗಳಿಸುವ ಉದ್ದೇಶದಿಂದ ಪ್ರಯತ್ನ ಮಾಡುತ್ತಿದ್ದೆ. ಇಂದು ನನಗೆ ಲ ಸಿಕ್ಕಿದೆ. ನಾನು ಮುಂದೆ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದ್ದೇನೆ. ನಂತರ ಪ್ರಾಧ್ಯಾಪಕಿಯಾಗಿ ಕರ್ತವ್ಯನಿರ್ವಹಿಸುವ ಗುರಿ ಇದೆ. ನನ್ನ ಸಾಧನೆಗೆ ಪಾಲಕರ ಪ್ರೀತಿ ಮತ್ತು ಉಪನ್ಯಾಸಕರ ಪ್ರೋತ್ಸಾಹ ಕಾರಣ. - ಎಸ್.ಅನುಷಾ, 5 ಚಿನ್ನದ ಪದಕ, ಎಂ.ಎಸ್ಸಿ, ಬೆಂ.ನಗರ ವಿವಿ ವಿಶ್ವವಿದ್ಯಾಲಯದಲ್ಲಿ 162 ಹುದ್ದೆಗಳ ಭರ್ತಿಗೆ ಸರ್ಕಾರ ಅವಕಾಶ ನೀಡಿದೆ. ಆದರೆ, ಒಳ ಮೀಸಲಾತಿ ವಿಚಾರದ ಹಿನ್ನೆಲೆಯಲ್ಲಿ ನೇಮಕಾತಿಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಮ್ಮೆ ಮೀಸಲಾತಿ ವಿಚಾರ ಸ್ಪಷ್ಟವಾದಲ್ಲಿ, ನೇಮಕಾತಿ ನಡೆಸಲಾಗುವುದು. - ಪ್ರೊ.ಕೆ.ಆರ್.ಜಲಜಾ, ಕುಲಪತಿ(ಪ್ರಭಾರ), ಬೆಂ.ನಗರ ವಿವಿ