

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ (ಬಿಸಿಯು) ಕುಲಪತಿ ಪ್ರೊ.ಎಸ್.ಜಾಫೆಟ್ ಅವರ ಅಧಿಕಾರಾವಧಿ ಶುಕ್ರವಾರ (ನ.20) ಅಂತ್ಯವಾಗಲಿದ್ದು, ಪ್ರಭಾರಿ ಕುಲಪತಿಯಾಗಿ ವಿವಿಯ ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ.ಎನ್.ನರಸಿಂಹ ಮೂರ್ತಿ ಅವರನ್ನು ಸರ್ಕಾರ ನೇಮಕ ಮಾಡಿದೆ.
ವಿವಿಯ ಕುಲಾಧಿಪತಿಯೂ ಆದ ರಾಜ್ಯಪಾಲ ವಜುಬಾಯಿ ವಾಲ ಅವರು ಈ ಆದೇಶ ಮಾಡಿದ್ದು, ಹಿರಿಯ ಡೀನ್ ಪ್ರೊ.ಎನ್.ನರಸಿಂಹಮೂರ್ತಿ ಅವರನ್ನು ಬೆಂ.ನಗರ ವಿವಿಯ ಪ್ರಭಾರ ಕುಲಪತಿಯಾಗಿ ನೇಮಕ ಮಾಡಲಾಗಿದ್ದು ನ.21ರಿಂದ ಫೆ.28ರವರೆಗೆ ಅಥವಾ ನೂತನ ಕುಲಪತಿ ನೇಮಕಗೊಳ್ಳುವವರೆಗೆ ಈ ನೇಮಕಾತಿ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಬೆಂ.ನಗರ ವಿವಿಯ ಕಲಾ ನಿಖಾಯದ ಡೀನ್ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರೊ.ಎನ್.ನರಸಿಂಹ ಮೂರ್ತಿ ಅವರು 2014 ಸೆಪ್ಟಂಬರ್‌ನಲ್ಲಿ ಬೆಂಗಳೂರು ವಿವಿಯ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ಬೆಂಗಳೂರು ವಿವಿ ವಿಭಜನೆ ಬಳಿಕ ಅವರು ಹೊಸದಾಗಿ ಸೃಷ್ಟಿಸಿ ಬೆಂ.ನಗರ ವಿವಿಯ ಸಮೂಹ ವಿಭಾಗದಲ್ಲಿ ತಮ್ಮ ಸೇವೆ ಮುಂದುವರೆಸಿದ್ದರು.
ನೇಮಕಕ್ಕೆ ಆಕ್ಷೇಪ: ಪ್ರೊ.ನರಸಿಂಹ ಮೂರ್ತಿ ಅವರನ್ನು ಪ್ರಭಾರ ಕುಲಪತಿಯಾಗಿ ನೇಮಕಾತಿ ಆದೇಶ ಹೊರ ಬೀಳುತ್ತಿದ್ದಂತೆಯೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂ.ನಗರ ವಿವಿಯ ವಿಜ್ಞಾನ ನಿಖಾಯದ ಡೀನ್ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಪಾಂಡುರಂಗಶೆಟ್ಟಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ನಿಯಮಾನುಸಾರ ಹಿರಿಯ ಡೀನ್ ಅವರನ್ನು ಪ್ರಭಾರ ಕುಲಪತಿಯಾಗಿ ನೇಮಕ ಮಾಡಬೇಕು. ಆದರೆ, ನರಸಿಂಹಮೂರ್ತಿ ಅವರು ವಿವಿಯಲ್ಲಿನ ಡೀನ್‌ಗಳ ಪೈಕಿ ಕಿರಿಯ ಡೀನ್ ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ಹಿರಿಯ ಡೀನ್ ಆಯ್ಕೆ ವಿಚಾರದಲ್ಲಿ ಆಗಿರುವ ತಪ್ಪು ಸರಿಪಡಿಸುವಂತೆ ಪ್ರೊ.ಪಾಂಡುರಂಗಶೆಟ್ಟಿ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.