

ಮಡಿಕೇರಿ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರನ್ನು ಗುತ್ತಿಗೆ ಪದ್ಧತಿ ಬದಲು ನೇರಪಾವತಿಗೆ ಒಳಪಡಿಸುವಂತೆ ಆಗ್ರಹಿಸಿ ನ೨೮ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜುಲೈನಲ್ಲಿ ರಾಜ್ಯಾದ್ಯಂತ ನಾಲ್ಕು ದಿನಗಳ ಕಾಲ ನಡೆಸಿದ ಹೋರಾಟದ ಪರಿಣಾಮ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ನೇಮಕಾತಿಯಲ್ಲಿ ಕಸ ಸಾಗಿಸುವ ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್, ಸಹಾಯಕರು, ಯೂಜಿಡಿ ಕಾರ್ಮಿಕರನ್ನು ನೇರಪಾವತಿಗೆ ತರಲು ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ಸಹಾಯಕರು, ಡಾಟ ಆಪರೇಟರುಗಳನ್ನು ಗುತ್ತಿಗೆ ಪದ್ಧತಿಯಲ್ಲಿ ನೇಮಕ ಮಾಡಲಾಗುತ್ತಿದೆ. ಇವರನ್ನು ನೇರಪಾವತಿಗೆ ಒಳಪಡಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಈರಪ್ಪ ಶೆಟ್ಟಿ, ಉಪಾಧ್ಯಕ್ಷ ಬೋಪಣ್ಣ, ಕಾರ್ಯದರ್ಶಿ ರಮೇಶ್ ಕುಟ್ಟಪ್ಪ, ಜಿಲ್ಲಾ ಸಂಚಾಲಕ ಮಹದೇವಪ್ಪ, ಹೊರಗುತ್ತಿಗೆ ನೌಕರರಾದ ಶ್ವೇತಾ ಉಪಸ್ಥಿತರಿದ್ದರು.