ಮೈಸೂರು: ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಫೆಬ್ರವರಿ 1ರಂದು ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಆರ್.ಶೇಷಾದ್ರಿ ತಿಳಿಸಿದರು.
ಸರ್ಕಾರ ಕೇವಲ ಐದು ಗ್ಯಾರಂಟಿಗಾಗಿ ಸಂಪನ್ಮೂಲ ಕ್ರೋಡೀಕರಿಸುತ್ತಿದೆಯೇ ಹೊರತು ಕಾರ್ಮಿಕ ವರ್ಗಕ್ಕೆ ನೀಡಿದ್ದ ಭರವಸೆ ಈಡೇರಿಸುವ ಯತ್ನ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರೂ, ನಮ್ಮನ್ನು ಕಡೆಗಣಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಂದು ರಾಜ್ಯದ ನಾನಾ ಭಾಗದಿಂದ ಕಾರ್ಮಿಕರು ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಾಥಾ ಮೂಲಕ ಸ್ವಾತಂತ್ರ್ಯ ಉದ್ಯಾನ ತಲುಪಿ ಅಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಕೈಗಾರಿಕಾ ಕಾರ್ಮಿಕರ ದುಡಿಮೆಯ ಅವಧಿ 12 ಗಂಟೆಗೆ ಹೆಚ್ಚಿಸಿರುವ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಬೇಕು, ಹಲವಾರು ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 1.70 ಲಕ್ಷ ಅಸಂಘಟಿತರಿಗೆ ಕನಿಷ್ಠ ಕೂಲಿ 31,500 ರೂ., ನಿಗದಿ ಪಡಿಸಬೇಕು. ಸ್ಕೀಂ ವರ್ಕರ್‌ಗಳಿಗೆ ನೀಡಿದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ., ಸಹಾಯಕಿಯರಿಗೆ, ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೂ ಮಾಸಿಕ 10 ಸಾವಿರ ರೂ. ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಕಾರ್ಯಕರ್ತೆಯರಿಗೆ ಇಡುಗಂಟು, ಇಎಸ್‌ಐ ಸೌಲಭ್ಯ ನೀಡಬೇಕು. ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ನಡೆದಿರುವ ಹಣದ ದುರುಪಯೋಗ ಕುರಿತ ತನಿಖೆ ನಡೆಸಿ ದುರುಪಯೋಗ ತಡೆಯಬೇಕು. ಈಗಿನ ಸರ್ಕಾರ ಕಾರ್ಮಿಕರ ಕುಟುಂಬದ ಸದಸ್ಯರಿಗೆ ಆರೋಗ್ಯ ತಪಾಸಣೆಯನ್ನು ಖಾಸಗಿ ಆಸ್ಪತ್ರೆಯವರಿಗೆ ನೀಡಿರುವುದು ಭ್ರಷ್ಟಾಚಾರಕ್ಕೆ ಆಸ್ಪದ ನೀಡಿದೆ. ಇದನ್ನು ಹಿಂಪಡೆದು ಸರ್ಕಾರಿ ಆಸ್ಪತ್ರೆಗಳಿಗೆ ಮತ್ತು ಸಹಕಾರ ಕ್ಷೇತ್ರದ ಆಸ್ಪತ್ರೆಗೆ ನೀಡಿ ಕಾರ್ಮಿಕರ ನಿಧಿಯ ದುರ್ಬಳಕೆ ತಡೆಗಟ್ಟಬೇಕು ಎನ್ನುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದು ಹೇಳಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಎನ್.ಕೆ.ದೇವದಾಸ್, ಮುಖಂಡರಾದ ಸೋಮರಾಜೇ ಅರಸ್, ಡಿ.ಜಗನ್ನಾಥ್, ರಾಮು ಇತರರು ಇದ್ದರು.