

ಮೈಸೂರು: ಕೃಷಿ ಪರವಾದ ಬಜೆಟ್ ಮಂಡಿಸಬೇಕು ಹಾಗೂ ಗ್ರೀನ್ ಬಡ್ಸ್ ಕಂಪನಿಯಿಂದ ವಂಚನೆಗೊಳಗಾದವರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಫೆ.6 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಗ್ರೀನ್‌ಬಡ್ಸ್ ಆಗ್ರೋ ಕಂಪನಿಯಿಂದ ವಂಚನೆಗೆ ಒಳಗಾಗಿರುವ ಒಂದೂವರೆ ಲಕ್ಷ ಬಡ ಜನರಿಗೆ ಈಗಾಗಲೇ ಮುಟ್ಟುಗೋಲು ಹಾಕಿರುವ ಕಂಪನಿ ಆಸ್ತಿಗಳನ್ನು ಕೂಡಲೇ ಹರಾಜು ಹಾಕಿ ವಂಚನೆಗೆ ಒಳಗಾದವರಿಗೆ ಹಣ ಕೊಡಿಸಬೇಕು. ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು, ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ತೆಲಂಗಾಣ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದ ರೀತಿಯಲ್ಲಿ ರಾಜ್ಯದಲ್ಲಿಯೂ ಸಾಲ ಮನ್ನಾ ಮಾಡಬೇಕು. ಕಬ್ಬಿನ ಎಫ್‌ಆರ್‌ಪಿ ದರ ರೈತರ ಹೊಲದಲ್ಲಿನ ದರ ಎಂದು ಬದಲಾಯಿಸಬೇಕು, ಈಗಾಗಲೇ ಕಬ್ಬು ಕಟಾವು ಸಾಗಣಿಕೆ ದರ ಸಕ್ಕರೆ ಕಾರ್ಖಾನೆಗಳು ಮನಬಂದಂತೆ ಕಡಿತ ಮಾಡಿರುವ ಹೆಚ್ಚುವರಿ ಹಣ ರೈತರಿಗೆ ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು.
2022-23ನೇ ಸಾಲಿನಲ್ಲಿ ಒಂದು ಟನ್ ಕಬ್ಬಿಗೆ 150 ರೂ. ಹೆಚ್ಚುವರಿ ದರ ನೀಡಲು ಸರ್ಕಾರ ಆದೇಶಿಸಿದ್ದು, ಈ ಹಣವನ್ನು ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು, ಇಲ್ಲವೇ ಸರ್ಕಾರವೇ ರೈತರಿಗೆ ಪಾವತಿಸಬೇಕು. ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಎಂಎಸ್‌ಪಿ ಖರೀದಿ ಕೇಂದ್ರ ತೆರೆದು, ರೈತರಿಂದ ಖರೀದಿಸುವ ಮಿತಿ ರದ್ದುಗೊಳಿಸಿ ಪಂಜಾಬ್, ಹರಿಯಾಣ, ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ಖರೀದಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಲಕ್ಷ್ಮೀಪುರ ವೆಂಕಟೇಶ್, ಕಮಲಮ್ಮ, ಅಂಬಳೆ ಮಂಜುನಾಥ್, ಮಹದೇವಸ್ವಾಮಿ, ಸುನಿಲ್ ಇದ್ಧರು