

ಮೈಸೂರು: ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಡಿ.22ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ ನಾರಾಯಣ ಹೇಳಿದರು.
ಪೌರ ಕಾರ್ಮಿಕರ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಅಂದು ಮೈಸೂರಿನಿಂದ ಬೆಂಗಳೂರುವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಗುವುದು. ನೇರ ವೇತನ ಪೌರಕಾರ್ಮಿಕರು, ಮೇಲ್ವಿಚಾರಕರು, ಗುತ್ತಿಗೆ ಪದ್ಧತಿ ಅಡಿಯಲ್ಲಿ ಕೆಲಸ ಮಾಡುತ್ತಿರುವ ಆಟೋ ಚಾಲಕರು, ಲಾರಿ ಚಾಲಕರು, ಸಹಾಯಕರು, ಲೋಡರ್ಸ್‌ಗಳು ಹಾಗೂ ಕ್ಲಿನರ್ಸ್‌ಗಳನ್ನು ಕಾಯಂ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ನಮ್ಮ ನಿರಂತರ ಹೋರಾಟದ ಫಲವಾಗಿ ದೇಶದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ಗುತ್ತಿಗೆ ಪದ್ಧತಿ ರದ್ದಾಗಿ ನೇರ ಪಾವತಿ ವೇತನ ಜಾರಿಗೆ ತರಲಾಯಿತು. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾದ ಸಂದರ್ಭ ಕಾಂಗ್ರೆಸ್ ಸರ್ಕಾರ ಪೌರಕಾರ್ಮಿಕರ ಕಾಯಂ ಭರವಸೆ ನೀಡಿತ್ತು.ನಂತರ ಬಂದ ಬಿಜೆಪಿ ಸರ್ಕಾರ 29 ಸಾವಿರ ಪೌರಕಾರ್ಮಿಕರ ಪೈಕಿ 11 ಸಾವಿರ ಪೌರ ಕಾರ್ಮಿಕರನ್ನು ಮಾತ್ರ ಕಾಯಂಗೊಳಿಸಿದರು. ಉಳಿದ ಪೌರ ಕಾರ್ಮಿಕರನ್ನು ಸಹ ಕಾಯಂಗೊಳಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ 25 ಸಾವಿರ ಪೌರಕಾರ್ಮಿಕರನ್ನು ಕಾಯಂ ಮಾಡುವ ಭರವಸೆ ನೀಡಿತ್ತು. ಹಾಗಾಗಿ ಎಲ್ಲ ಪೌರ ಕಾರ್ಮಿಕರನ್ನ ಕಾಯಂಗೊಳಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.