ಬೆಂಗಳೂರು ಕೇಂದ್ರ ಮತದಾನ: ಹಿರಿ ಜೀವಗಳೇ ಚಿರ ಯುವಕರು, ಸದ್ದುಗುಂಟೆಪಾಳ್ಯದಲ್ಲಿ ಕೇಸರಿ ಸದ್ದು, ಚೊಂಬಿಡಿದ ಯುವ ಕಾಂಗ್ರೆಸ್

voter
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ತಾಲೂಕಿನ ಮತಗಟ್ಟೆಯೊಂದರಲ್ಲಿ ಸರದಿಯಲ್ಲಿ ನಿಂತಿದ್ದ ಮಹಿಳೆಯರು.
Published on

ಬೆಂಗಳೂರು ಹಿರಿಯ ನಾಗರಿಕರು ಯುವಕರಂತೆ ಉತ್ಸಾಹದಿಂದ ಮತದಾನ, ಸದ್ದುಗುಂಟೆ ಪಾಳ್ಯದಲ್ಲಿ ಕೇಸರಿ ಅಂಗಿ ಧರಿಸಿ ಮತದಾನಕ್ಕೆ ಆಗಮಿಸಿದ್ದ ಯುವಕನ ಮೇಲೆ ಹಲ್ಲೆ ಹಾಗೂ ಯುವ ಕಾಂಗ್ರಸ್ ವತಿಯಿಂದ ರಾಜಾಜಿನಗರದಲ್ಲಿ ಚುನಾವಣೆ ದಿನವೂ ಬಿಜೆಪಿಗೆ ಚೊಂಬು ಪ್ರದರ್ಶನ...

ಇದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ದಿನ ವಿಶೇಷವಾಗಿ ಕಂಡುಬಂದ ದೃಶ್ಯಗಳು. ಹಲವು ಮತಗಟ್ಟೆಗಳಲ್ಲಿ ಉದ್ದನೆಯ ಸಾಲುಗಳು ಕಂಡು ಬಂದವು. ಮತಗಟ್ಟೆಗಳಲ್ಲಿ ಮಧ್ಯ ವಯಸ್ಸಿನವರು ಮತ್ತು ಹಿರಿಯ ನಾಗರಿಕರು ಉತ್ತಮ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಎಂದಿನಂತೆ ಯುವ ಮತದಾರರ ಸಂಖ್ಯೆ ಮತಗಟ್ಟೆಗಳಲ್ಲಿ ಕಡಿಮೆ ಇತ್ತು.

ಕೇಸರಿ ಅಂಗಿ ಧರಿಸಿದ ಯುವಕನ ಮೇಲೆ ಹಲ್ಲೆ:

ಕೇಸರಿ ಅಂಗಿ ಧರಿಸಿ ಕುಟುಂಬದೊಂದಿಗೆ ಬಂದಿದ್ದ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಸಿ.ವಿ.ರಾಮನ್ ನಗರದ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ. ಕೇಸರಿ ಅಂಗಿ ಧರಿಸಿದ ಯುವಕ ಮತಗಟ್ಟೆ ಪ್ರವೇಶಿಸುವುದನ್ನು ಆಕ್ಷೇಪಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಂತರ ಈ ವಿಚಾರವಾಗಿ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಧಾವಿಸಿದ ಬೈಯ್ಯಪ್ಪನಹಳ್ಳಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಮತ್ತೆ ಚೊಂಬು ತೋರಿಸಿದ ಯುವ ಕಾಂಗ್ರೆಸ್:

ರಾಜಾಜಿನಗರದ ಮಂಜುನಾಥ ನಗರದಲ್ಲಿರುವ ಗೌತಮ್ ಕಾಲೇಜಿನ ಮತಗಟ್ಟೆ ಬಳಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹಾಗೂ ಕಾರ್ಯಾಧ್ಯಕ್ಷ ಮಂಜುನಾಥ್ ತಂಡ ಚೊಂಬು ಹಾಗೂ ಗ್ಯಾಸ್ ಸಿಲಿಂಡರ್ ಪ್ರದರ್ಶನ ಮಾಡಿದರು.ಇದೇ ವೇಳೆ ಯುವಕನೊಬ್ಬ ಗ್ರ್ಯಾಜುಯೇಟ್ ಧಿರಿಸಿನಲ್ಲಿ ಬಂದು ಕೈಯಲ್ಲಿ ಚೊಂಬು ಹಿಡಿದು ಪರೋಕ್ಷವಾಗಿ ಟೀಕಿಸಿದರು.

ಆಕ್ಸಿಜನ್ ಕಾನ್ಸಂಟ್ರೇಟರ್‌ನಲ್ಲಿ ಬಂದು ಮತದಾನ

ರಾಜಾಜಿನಗರದ 2ನೇ ಬ್ಲಾಕ್ ನಿವಾಸಿ 83 ವರ್ಷದ ಗೀತಾ ಅವರು ಆಕ್ಸಿಜನ್ ಕಾನ್ಸಂಟ್ರೇಟರ್‌ನಲ್ಲಿಯೇ ಬಂದು ಮತದಾನ ಮಾಡಿದ್ದು ಬಹಳ ವಿಶೇಷವಾಗಿತ್ತು. ಕರೊನಾ ವೇಳೆ ಅನಾರೋಗ್ಯಕ್ಕೀಡಾದ ಅವರು ಕಳೆದ 4 ವರ್ಷಗಳಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುತ್ತಿದ್ದಾರೆ. ಚುನಾವಣಾ ಪ್ರಚಾರವನ್ನು ನೋಡಿದ್ದ ಅವರು ಜೀವನೋತ್ಸಾಹದಿಂದ ಮತ ಚಲಾವಣೆ ಮಾಡಿದ್ದೇನೆಂದು ಸಂತಸ ವ್ಯಕ್ತಪಡಿಸಿದರು.

15 ಬೂತ್‌ಗಳಿದ್ದ ಸಿ.ವಿ.ರಾಮನ್ ನಗರದ ಕೇಂದ್ರಿಯ ವಿದ್ಯಾಲಯ ಮತಗಟ್ಟೆಯಲ್ಲಿ 81 ವರ್ಷದ ನಿವೃತ್ತ ಇಂಜಿನಿಯರ್ ಶಿವರಾಮಕೃಷ್ಣ ಶಾಸ್ತ್ರೀ ಗಾಲಿ ಕುರ್ಚಿಯಲ್ಲಿ ಬಂದು ಮತ ಚಲಾಯಿಸಿದರು. ಮಗ ಹಾಗೂ ಸೊಸೆ ಜತೆ ಡಿಆರ್‌ಡಿಒ ಕೇಂದ್ರಿಯ ವಿದ್ಯಾಲಯದ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದರು. ಮನೆಯಿಂದಲೇ ಮತದಾನಕ್ಕೆ ಅವಕಾಶವಿದ್ದರೂ ಮತಗಟ್ಟೆ ಆಯ್ಕೆ ಮಾಡಿಕೊಂಡ ಅವರು, ನನಗೆ ಮನೆಗಿಂತ ಮತಗಟ್ಟೆಗೆ ಬಂದು ಮತದಾನ ಮಾಡುವುದು ಖುಷಿ ನೀಡುತ್ತದೆ. ತಪ್ಪದೇ ಮತದಾನ ಮಾಡುತ್ತಿದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net