

ರಾಮ ಕಿಶನ್ ಕೆ.ವಿ. ಬೆಂಗಳೂರು
ರಾತ್ರಿ ಇದ್ದ ಬಸ್ ತಂಗುದಾಣ ಬೆಳಗಾಗುವುದರೊಳಗೆ ಮಾಯ! ಇದು ಹೇಗೆ ಸಾಧ್ಯ ಎಂದು ನಗರದ ಅಶೋಕ ಪಿಲ್ಲರ್ ಸರ್ಕಲ್ ಸುತ್ತಮುತ್ತಲಿನ ಜನರು ಚಿಂತೆಗೀಡಾಗಿದ್ದಾರೆ...!
ಹೌದು, ಅಶೋಕ್ ಪಿಲ್ಲರ್ ಸರ್ಕಲ್ನಿಂದ ಶಿವಾಜಿನಗರಕ್ಕೆ ತೆರಳುವ ಮಾರ್ಗದಲ್ಲಿದ್ದ ತಂಗುದಾಣ ನಾಪತ್ತೆಯಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಅಶೋಕ ಪಿಲ್ಲರ್ ಸರ್ಕಲ್ನಿಂದ ಮೆಜೆಸ್ಟಿಕ್, ಜಯನಗರ ಹಾಗೂ ಶಿವಾಜಿನಗರ ಕಡೆಗೆ ಸಾಗುವ ಮಾರ್ಗದಲ್ಲಿ ಸುವ್ಯವಸ್ಥಿತವಾದ ಬಸ್ ನಿಲ್ದಾಣವಿತ್ತು. ಮಜೆಸ್ಟಿಕ್ ಮಾರ್ಗದಲ್ಲಿದ್ದ ಬಸ್ ನಿಲ್ದಾಣವನ್ನು ಎರಡು ವರ್ಷದ ಹಿಂದೆ ತೆಗೆದು ಹಾಕಲಾಗಿದೆ. ಇದೀಗ ಶಿವಾಜಿನಗರ ಮಾರ್ಗದಲ್ಲಿದ್ದ ನಿಲ್ದಾಣವನ್ನೂ ಏಕಾಏಕಿ ತೆರವುಗೊಳಿಸಲಾಗಿದೆ. ಜಯನಗರ ಮಾರ್ಗದಲ್ಲಿದ್ದ ತಂಗುದಾಣ ಆಟೋ ರಿಕ್ಷಾ ನಿಲ್ದಾಣವಾಗಿ ಬದಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಯಾವೊಬ್ಬ ಅಧಿಕಾರಿಯೂ ಸಮರ್ಪಕವಾಗಿ ಉತ್ತಿರಿಸುತ್ತಿಲ್ಲ. ಪರಿಣಾಮ ಜನರು ಬಿಸಿಲು&ಮಳೆಯಲ್ಲೇ ಬಸ್ಸಿಗಾಗಿ ಕಾಯಬೇಕಿದೆ. ಜತೆಗೆ ಹಿರಿಯ ನಾಗರೀಕರು ಸಮಸ್ಯೆ ಅನುಭವಿಸುವಂತಾಗಿದೆ. ಖಾಸಗಿ ವ್ಯಕ್ತಿಗಳ ಲಾಭಕ್ಕಾಗಿ ಬಸ್ ನಿಲ್ದಾಣ ಕಣ್ಮರೆಯಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ತಂಗುದಾಣವನ್ನು ಯಾರು ತೆರವು ಮಾಡಿದ್ದಾರೆ ಎಂಬ ಬಗ್ಗೆ ಸ್ಥಳಿಯರಿಗೆ ಮಾಹಿತಿಯಿಲ್ಲ. ಆದರೆ ತೆರವಾದ ಶೆಲ್ಟರ್ ಮಾತ್ರ ನಿಲ್ದಾಣದ ಹಿಂಭಾಗದಲ್ಲಿದ್ದ ಖಾಸಗಿ ಸೈಟ್ನಲ್ಲಿ ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟ ವಸ್ತುಗಳು ಖಾಸಗಿ ಸೈಟ್ನಲ್ಲಿ ಯಾಕಿವೆ? ಎಲ್ಲವೂ ಕಾನೂನಾತ್ಮಕವಾಗಿದ್ದರೆ, ರಾತ್ರೋ ರಾತ್ರಿ ಯಾಕಾಗಿ ತೆರವು ಮಾಡಲಾಗಿದೆ ಎಂದು ಸ್ಥಳಿಯರು ಪ್ರಶ್ನಿಸುತ್ತಿದ್ದಾರೆ.
ಸದ್ಯ ಬಸ್ ಶೆಲ್ಟರ್ ತೆಗೆದು ಹಾಕಿರುವುದು ಅಶೋಕ ಪಿಲ್ಲರ್ ಸರ್ಕಲ್ ವ್ಯಾಪ್ತಿಯ ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. 'ಮುಂಜಾನೆ ನುಸುಕಿನ ಜಾವ ನಾಲ್ಕೈದು ವ್ಯಕ್ತಿಗಳು ಸೇರಿಕೊಂಡು ಶೆಲ್ಟರ್ ತೆಗೆಯುತ್ತಿದ್ದರು. ಈ ಬಗ್ಗೆ ವಿಚಾರಿಸಿದಾಗ ವ್ಯಕ್ತಿಯೊಬ್ಬ, ಇಲ್ಲಿ ಹೊಸದಾಗಿ ತಂಗುದಾಣ ನಿರ್ಮಿಸಲಾಗುತ್ತದೆ. ಹೀಗಾಗಿ ತೆರವುಗೊಳಿಸುತ್ತಿರುವುದಾಗಿ ತಿಳಿಸಿದ' ಎಂದು ಸ್ಥಳಿಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಶಿವಾಜಿನಗರ ಮಾರ್ಗದಲ್ಲಿದ್ದ ತಂಗುದಾಣ ಏಕಾಏಕಿ ಕಣ್ಮರೆಯಾಗಿದೆ. ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಇಲ್ಲಿ ನಿಲ್ದಾಣವಿದೆ. ನಿತ್ಯ ಸಾವಿರಾರು ಜನರು ಇಲ್ಲಿಂದ ಬಸ್ ಹತ್ತಿ, ಇಳಿದು ಮಾಡುತ್ತಿರುತ್ತಾರೆ. ಬಿಸಿಲು, ಮಳೆಯಲ್ಲಿ ಬಸ್ಗೆ ಕಾಯುವಾಗ ಈ ನಿಲ್ದಾಣ ಸಹಕಾರಿಯಾಗುತ್ತಿತ್ತು. ಇದೀಗ ತಂಗುದಾಣ ಇಲ್ಲವಾಗಿದ್ದು, ಪ್ರಯಾಣಿಕರು ಮರದಡಿಯಲ್ಲಿ ನಿಲ್ಲಬೇಕಾಗಿದೆ. ಬಸ್ ಬರುವುದು ತಡವಾದರೆ ಹಿರಿಯ ನಾಗರೀಕರು ನಿಂತುಕೊಂಡೇ ಬಾಕಿ. ತಂಗುದಾಣ ಯಾಕಾಗಿ ತೆರವುಗೊಂಡಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನೋಟೀಸ್ ಕೂಡ ಜಾರಿಯಾಗಿಲ್ಲ. ಖಾಸಗಿ ವ್ಯಕ್ತಿಗಳ ಅನೂಲಕಕ್ಕಾಗಿ ತಂಗುದಾಣ ತೆರವುಗೊಂಡಿರುವ ಸಾಧ್ಯತೆಯಿದೆ ಎಂದು ಸ್ಥಳಿಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಶೋಕ ಪಿಲ್ಲರ್ ಸರ್ಕಲ್ನಲ್ಲಿ ಒಟ್ಟು 3 ಬಸ್ ತಂಗುದಾಣವಿತ್ತು. ಶಿವಾಜಿನಗರಕ್ಕೆ ಸಾಗುವ ರಸ್ತೆಯಲ್ಲಿದ್ದ ತಂಗುದಾಣವನ್ನು ಯಾರು ತೆರವುಗೊಳಿಸಿದ್ದಾರೆಂಬ ಮಾಹಿತಿಯಿಲ್ಲ. ಇದರಿಂದಾಗಿ ನಿತ್ಯ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ. ನಿಲ್ದಾಣದ ಶೆಲ್ಟರ್ ಖಾಸಗಿ ಸೈಟ್ನಲ್ಲಿದೆ. ಸುಸ್ಥಿತಿಯಲ್ಲಿದ್ದ ನಿಲ್ದಾಣ ಏಕಾಏಕಿ ಯಾಕೆ ಕಣ್ಮರೆಯಾಗಿದೆ ಎಂಬುದು ಗೊತ್ತಿಲ್ಲ.
- ಯೊಗೇಶ್, ಸ್ಥಳಿಯ
ಅಶೋಕ ಪಿಲ್ಲರ್ ಸರ್ಕಲ್ನಲ್ಲಿ ಒಂದೂ ಬಸ್ ತಂಗುದಾಣ ಇಲ್ಲದಂತಾಗಿದ್ದು, ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಮಳೆಗಾಲ ಆರಂಭವಾಗಿದ್ದು, ಜೋರು ಮಳೆಯಾದರೆ ಆಶ್ರಯಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರೋರಾತ್ರಿ ಬಸ್ ತಂಗುದಾಣ ತೆರವಾಗಿರುವುದು, ಅಲ್ಲಿದ್ದ ಶೆಲ್ಟರ್ ಖಾಸಗಿ ಸೈಟ್ನಲ್ಲಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
-ಕೆ.ಎಂ.ಲಕ್ಷ್ಮೀಶ್, ಸಮಾಜಸೇವಕ