ಬಿರುಗಾಳಿ ಸಹಿತ ಮಳೆಗೆ ಬೆಂಗಳೂರು ತತ್ತರ

rain effect
Published on

ಬೆಂಗಳೂರು:ರಾಜಧಾನಿಯಲ್ಲಿ ಸತತ ಎರಡನೇ ದಿನವೂ ವರುಣಾರ್ಭಟ ಮುಂದುವರಿದಿದ್ದು, ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಭಾನುವಾರ ಹಲವೆಡೆ ಅವಾಂತರ ಸೃಷ್ಟಿಯಾಗಿ ನಾಗರಿಕರು ಪರದಾಡಿದರು.

ಶನಿವಾರ ಧಾರಾಕಾರ ಮಳೆಯಿಂದ ಜನರು ತೊಂದರೆ ಅನುಭವಿಸಿದ್ದರು. ಭಾನುವಾರ ಬೆಳಗ್ಗೆಯಿಂದ ಬಿಸಿಲು ವಾತಾವರಣ ಇತ್ತು. ಸಂಜೆ 5.30ಕ್ಕೆ ಶುರುವಾದ ಬಿರುಗಾಳಿ, ಗುಡುಗು ಮಿಂಚುಸಹಿತ ಮಳೆಯು ತಡರಾತ್ರಿವರೆಗೂ ಸುರಿಯಿತು. ವಾರಾಂತ್ಯ ಹಿನ್ನೆಲೆಯಲ್ಲಿ ಹೊರಗಡೆ ತೆರಳಿದ್ದ ಜನರು ತೊಂದರೆ ಅನುಭವಿಸುವಂತಾಯಿತು.ಕೋರಮಂಗಲ, ಮಡಿವಾಳ, ವಿಲ್ಸನ್​ ಗಾರ್ಡನ್​, ಡೇರಿ ಸರ್ಕಲ್​ ಸುತ್ತಮುತ್ತ ಮಳೆಯಿಂದಾಗಿ ವಾಹನದಟ್ಟಣೆ ಹೆಚ್ಚಾಗಿತ್ತು. ರಸ್ತೆಗೆ ಉರುಳಿದ್ದ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸಂಚಾರ ಪೊಲೀಸರು ಮುಂದಾಗಿದ್ದರು. ವಿದ್ಯುತ್​ ಪೂರೈಕೆ ವ್ಯತ್ಯಯವಾಗಿದ್ದರಿಂದ ಕೆಲ ಬಡಾವಣೆಗಳಲ್ಲಿ ಬೆಳಕಿಲ್ಲದೆ ನಿವಾಸಿಗಳು ಪರದಾಡಬೇಕಾಯಿತು. ಜಕ್ಕೂರು, ಕೆ.ಆರ್​. ಮಾರುಕಟ್ಟೆ, ಮೆಜೆಸ್ಟಿಕ್​, ದಯಾನಂದನಗರ, ಜಯನಗರ, ಬಸವನಗುಡಿ, ಕತ್ರಿಗುಪ್ಪೆ, ನಾಯಂಡಹಳ್ಳಿ, ಕೆಂಗೇರಿ, ವಿಜಯನಗರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ಜಾಲಹಳ್ಳಿ ಕ್ರಾಸ್​, ಹೆಬ್ಬಾಳ, ಯಲಹಂಕ ಸೇರಿ ಬೆಂಗಳೂರು ಉತ್ತರ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿದೆ.

ಮುಳುಗಿದ ಬಸ್​, ಪ್ರಯಾಣಿಕರು ಪಾರು:

ಶೇಷಾದ್ರಿಪುರದ ರಸ್ತೆಯ ಕಿನೋ ಟಾಕೀಸ್​ ಬಳಿಯ ಅಂಡರ್​ಪಾಸ್​ನಲ್ಲಿ ಮಳೆನೀರು ತುಂಬಿದ್ದು, ನೆಲಮಂಗಲದಿಂದ ಮೆಜೆಸ್ಟಿಕ್​ಗೆ ಬರುತ್ತಿದ್ದ ಬಿಎಂಟಿಸಿ ಬಸ್​ ಸಿಲುಕಿತ್ತು. ಅದೃಷ್ಟವಶಾತ್​ ಬಸ್​ನಲ್ಲಿದ್ದ ಹತ್ತಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹಿಂದೆಯೂ ಇಲ್ಲಿ ವಾಹನಗಳು ಸಿಲುಕುತ್ತಿದ್ದ ಕಾರಣ ಪಾಲಿಕೆ ಕೆಳಸೇತುವೆಯಲ್ಲಿ ನೀರೆತ್ತುವ ಪಂಪ್​ ಅಳವಡಿಸಿ ಕೆಲ ಹೊತ್ತಿನಲ್ಲೇ ಪೈಪ್​ಲೇನ್​ಗೆ ಹರಿಯುವಂತೆ ಮಾಡಿದ್ದರು. ಆದರೆ, ಭಾನುವಾರ ಹೆಚ್ಚು ಮಳೆಯಾಗಿದ್ದರಿಂದ ನೀರು ಸರಾಗವಾಗಿ ಹರಿದುಹೋಗದೆ ಸಮಸ್ಯೆ ಉಂಟಾಯಿತು. ಮಹಾಲಕ್ಷಿಲೇಔಟ್​​​ ಮಾರುತಿನಗರದ ಮುಖ್ಯರಸ್ತೆಯಲ್ಲಿ ಬುಡಸಮೇತ ಮರ ಬಿದ್ದಿದ್ದು, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮರದ ಪಕ್ಕ ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದ ವೇಳೆ ಮರ ಉರುಳಿಬಿದ್ದಿದೆ. ರಾಜಾಜಿನಗರದ ಮುಂಜುನಾಥನಗರ ರಸ್ತೆ ಜಲಾವೃತಗೊಂಡು ಅಕ್ಕಪಕ್ಕದ ಅಂಗಡಿಗಳಿಗೆ ನೀರು ನುಗ್ಗಿದೆ. ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದ ಎ.ಕೆ. ಕಾಲನಿ ರಸ್ತೆಯಲ್ಲಿ ಮ್ಯಾನ್​ಹೋಲ್​ ಉಕ್ಕಿ ಹರಿದ ಪರಿಣಾಮ ರಸ್ತೆಗಳ ಮೇಲೆ ಕೊಳಚೆನೀರು ಹರಿದು ಜನತೆ ಸಂಕಷ್ಟ ಅನುಭವಿಸಿದರು. ಕೆ.ಆರ್​. ಸರ್ಕಲ್​ ಸೇರಿ ಕೆಲ ಪ್ರಮುಖ ರಸ್ತೆಗಳು ಹೊಳೆಯಾಗಿ ಮಾರ್ಪಟ್ಟಿದ್ದವು. ಅಂಡರ್​ಪಾಸ್​, ಜಂಕ್ಷನ್​ಗಳಲ್ಲಿ ನೀರು ನಿಂತು ಸವಾರರು ಪರದಾಡಿದರು. ಬಿರುಗಾಳಿ ಮಳೆಗೆ ಹಲವು ಮರ, ರೆಂಬೆ&ಕೊಂಬೆಗಳು ಧರೆಗುರುಳಿ ಸಂಚಾರಕ್ಕೆ ಅಡ್ಡಿಯಾಯಿತು.

ಪ್ರಾಣಾಪಾಯದಿಂದ ಪಾರು

ಬಸವೇಶ್ವರನಗರದ 8ನೇ ಮುಖ್ಯರಸ್ತೆಯಲ್ಲಿ ಆಟೋ ಮೇಲೆ ಮರ ಬಿದ್ದು ಚಾಲಕನ ತಲೆಗೆ ಗಂಭೀರ ಗಾಯವಾಯಿತು. ತಕ್ಷಣವೇ ಆತನನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದರು. ಕೋರಮಂಗಲ ಬಳಿ ವಿದ್ಯುತ್​ ಕಂಬ, ಆಟೋದ ಮೇಲೆ ಮರ ಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಜಯನಗರ 3ನೇ ಬ್ಲಾಕ್​ನಲ್ಲಿ ಮರ ನೆಲಕ್ಕುರುಳಿದ್ದು, ಕಾರು ಜಖಂಗೊಂಡಿದೆ. ಗಿರಿನಗರದ 13ನೇ ಕ್ರಾಸ್​ನಲ್ಲಿರುವ ಮನೆಯೊಂದರ ಮೇಲೆ ಮರ ಬಿದ್ದಿದ್ದು, ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆ. ಮನೆಯಲ್ಲಿದ್ದ ಕುಟುಂಬಸ್ಥರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿವಾಳದಲ್ಲಿ ಬೃಹತ್​ ಮರವೊಂದು ಧರೆಗುರುಳಿದ ರಭಸಕ್ಕೆ 2 ವಿದ್ಯುತ್​ ಕಂಬಗಳು ತುಂಡಾಗಿವೆ. ಪೀಣ್ಯದ ಅರವಿಂದ ಮೋಟಾರ್ಸ್​ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಇದರಿಂದ ಕಾರಿನಲ್ಲಿ ಸಿಲುಕಿದ್ದ ಚಾಲಕನನ್ನು ಸ್ಥಳಿಯರು ರಕ್ಷಿಸಿದ್ದಾರೆ. ಬನ್ನೇರುಟ್ಟ ವೆಗಾ ಸಿಟಿ ಮಾಲ್​ ಬಳಿ ಮರ ನೆಲಕ್ಕುರುಳಿದೆ. ಕೆಲವೆಡೆ ರಸ್ತೆ ಬದಿ ನಿಂತ ವಾಹನ ಮಳೆ ನೀರಲ್ಲಿ ಕೊಚ್ಚಿ ಹೋಗಿದೆ. ಯಲಹಂಕ ಶೇಷಾದ್ರಿಪುರ ಕಾಲೇಜಿನ ಬಳಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ದೊಡ್ಡಬಳ್ಳಾಪುರ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಜಕ್ಕಸಂದ್ರ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಲುಲು ಮಾಲ್​ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯಿತು.

200 ಮರಗಳು ಧರೆಗೆ

ಬಿರುಗಾಳಿಸಹಿತ ಭಾರಿ ಮಳೆಯಿಂದ ನಗರದಲ್ಲಿ 200 ಮರಗಳು ಧರೆಗುರುಳಿವೆ. ಜತೆಗೆ 128 ರೆಂಬೆ, ಕೊಂಬೆಗಳು ಕೂಡ ಮುರಿದು ಬಿದ್ದಿವೆ. ಪಾಲಿಕೆಯ ದಣ ವಲಯದಲ್ಲಿ 40 ಮರ, ಪಶ್ಚಿಮ ವಲಯದಲ್ಲಿ 19 ಮರ, ಆರ್​.ಆರ್​.ನಗರ ವಲಯದಲ್ಲಿ 15 ಮರಗಳು ಉರುಳಿವೆ. ಮರಗಳು ಹಾಗೂ ರೆಂಬೆ, ಕೊಂಬೆ ಬಿದ್ದ ಬಳಿಕ ಬಿಬಿಎಂಪಿ ಸಹಾಯವಾಣಿಗೆ ನೂರಾರು ಕರೆಗಳು ದಾಖಲಾಗಿವೆ.

ಎಲ್ಲೆಲ್ಲಿ ಎಷ್ಟು ಮಳೆ?

ಪ್ರದೇಶದ ಹೆಸರು           ಮಿ.ಮೀ.

ಹೊರಮಾವು                   80

ಕೊಡಿಗೇಹಳ್ಳಿ                  70

ಬಸವೇಶ್ವರನಗರ               62

ಕಾಟನ್​ಪೇಟೆ                  55

ರಾಜಮಹಲ್​ ಗುಟ್ಟಹಳ್ಳಿ        55

ನಂದಿನಿ ಲೇಔಟ್​              54

ಹಂಪಿನಗರ                  50

ವಿದ್ಯಾಪಿಠ                    55

ಪೀಣ್ಯ ಕೈಗಾರಿಕಾ ಪ್ರದೇಶ    45

ಮಾರುತಿ ಮಂದಿರ           42

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net