

ಬೆಂಗಳೂರು: ರಾಜಧಾನಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಕೈಗಾರಿಕಾ ಪ್ರದೇಶಗಳು ನೆಲೆಗೊಂಡಿವೆ. ಈ ಹಿನ್ನೆಲೆಯಲ್ಲಿ ಸೋಂಕಿತರು ಕಾಣಿಸಿಕೊಳ್ಳದ ವಾರ್ಡ್ಗಳಿಗೆ ಲಾಕ್ಡೌನ್ ಪೂರ್ಣ ಸಡಿಲಿಕೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತ ಅನಿಲ್ಕುಮಾರ್ ಮನವಿಪತ್ರ ಸಲ್ಲಿಸಿದ್ದಾರೆ. ಆದರೆ ಸೋಂಕಿತರ ಏರಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ದಿಗ್ಬಂಧನ ಸಡಿಲಿಕೆಗೆ ಕುತ್ತು ಬರುವ ಸಾಧ್ಯತೆಗಳಿವೆ.
ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳನ್ನು ಲಾಕ್ಡೌನ್ ಸಡಿಲಿಕೆಗೆ ಅನುಕೂಲವಾಗುವಂತೆ ವಿಂಗಡಿಸಲು ರಾಜ್ಯ ಸರ್ಕಾರ ಆದೇಶ ನೀಡಿತ್ತು. ಅದರಂತೆ, ಈಗಾಗಲೇ ನಗರವನ್ನು 7 ವಲಯಗಳನ್ನಾಗಿ ಗುರುತಿಸಿ ವರದಿ ನೀಡಲಾಗಿದೆ. ಅದನ್ನಾಧರಿಸಿ ಸಡಿಲಿಕೆ ಸಿಕ್ಕರೆ ಅನುಕೂಲವಾಗಲಿದೆ ಎಂದು ಅನಿಲ್ಕುಮಾರ್ ಮಾಹಿತಿ ನೀಡಿದ್ದಾರೆ.
ಕಂಟೇನ್ಮೆಂಟ್ ಜೋನ್ 25ಕ್ಕೆ ಏರಿಕೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 3 ದಿನಗಳ ಹಿಂದೆ 22 ಕಂಟೇನ್ವೆುಂಟ್ ಜೋನ್ಗಳನ್ನು ಗುರುತಿಸಿ ಸೀಲ್ ಮಾಡಲಾಗಿತ್ತು. ಆದರೆ ಈಗ ಹೊಂಗಸಂದ್ರದ ಮಂಗಮ್ಮನಪಾಳ್ಯ, ಬೇಗೂರು, ಬಿಟಿಎಂ ಲೇಔಟ್ ಹಾಗೂ ಶಿವಾಜಿನಗರದ ಚಾಂದನಿ ಚೌಕ್ ಹೊಸದಾಗಿ ಸೇರ್ಪಡೆಯಾಗಿದ್ದು, ಕಂಟೇನ್ಮೆಂಟ್ ಪ್ರದೇಶಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಸುಧಾಮನಗರ ಹಾಗೂ ಹೊಂಗಸಂದ್ರ ವಾರ್ಡ್ಗಳಲ್ಲಿ ತಲಾ 2 ಪ್ರದೇಶಗಳನ್ನು ಸೀಲ್ ಮಾಡಲಾಗಿದೆ.
ನಾಲ್ವರು ಸಚಿವರ ಸ್ವಯಂ ಕ್ವಾರಂಟೈನ್ ಅವಧಿ ಮುಕ್ತಾಯ
ಬೆಂಗಳೂರು: ಖಾಸಗಿ ಸುದ್ದಿವಾಹಿನಿಯ ಕ್ಯಾಮರಾಮನ್ಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದ ಸಚಿವರೆಲ್ಲ ಈಗ ನಿರಾಳರಾಗಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟಿದ್ದು, ವರದಿಯಲ್ಲಿ ಎಲ್ಲರದ್ದೂ ನೆಗೆಟಿವ್ ಬಂದಿದೆ. ಎಲ್ಲರೂ ಎರಡೆರಡು ಬಾರಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ನಾಲ್ಕೂ ಜನರ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದ್ದು, ಅಶ್ವತ್ಥನಾರಾಯಣ್ ಬುಧವಾರವೇ ವಿಧಾನಸೌಧಕ್ಕೆ ಬಂದಿದ್ದರು. ಬಸವರಾಜ ಬೊಮ್ಮಾಯಿ, ಸುಧಾಕರ್ ಗುರುವಾರದಿಂದ ಕಚೇರಿಗೆ ಬರಲಿದ್ದಾರೆ.