

ಬೆಂಗಳೂರು: ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ಯಿಂದ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ನಷ್ಟಕ್ಕೆ ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕ್ಕಾಗಿ ಆಗ್ರಹಿಸಿ ಖಾಸಗಿ ಸಾರಿಗೆಗಳ ಒಕ್ಕೂಟದ ವತಿಯಿಂದ ‘ಬೆಂಗಳೂರು ಬಂದ್’ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ (ಸೆ.೧೧) ಖಾಸಗಿ ವಾಹನಗಳ ಸಂಚಾರ ಬಹುತೇಕ ಸ್ತಬ್ಧವಾಗಲಿದೆ.
ಆಟೋ, ಟ್ಯಾಕ್ಸಿ, ಶಾಲಾ-ಕಾಲೇಜು ಬಸ್‌ಗಳು, ಖಾಸಗಿ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸುವುದರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗಲಿದೆ. ಭಾನುವಾರ ಮಧ್ಯರಾತ್ರಿಯಿಂದಲೇ ಪ್ರತಿಭಟನೆ ಆರಂಭವಾಗಿದ್ದು, ಪ್ರಯಾಣಿಕರಿಗೆ, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಕೂಡ ಈ ಬಂದ್‌ನ ಬಿಸಿ ತಟ್ಟಲಿದೆ.
೭ ಲಕ್ಷಕ್ಕೂ ಹೆಚ್ಚು ವಾಹನಗಳ ಸೇವೆ ಸ್ಥಗಿತ:
ಆಟೋ ರಿಕ್ಷಾಗಳು, ಓಲಾ, ಊಬರ್ ಕ್ಯಾಬ್‌ಗಳು ಮತ್ತು ಆಟೋಗಳು, ಕಂಪನಿ ಕ್ಯಾಬ್ಗಳು, ಏರ್‌ಪೋರ್ಟ್ ಟ್ಯಾಕ್ಸಿಗಳು, ಶಾಲಾ ಬಸ್‌ಗಳು, ಕಂಪನಿಗಳಿಗೆ ಸೇವೆ ಒದಗಿಸುವ ಖಾಸಗಿ ಬಸ್‌ಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಖಾಸಗಿ ಕಂಪನಿಗಳು ಸೇರಿ ವಿವಿಧೆಡೆ ಕೆಲಸಗಳಿಗೆ ತೆರಳುವ ನೌಕರರಿಗೂ ಕೂಡ ತೊಂದರೆಯಾಗುವ ಸಾಧ್ಯತೆಯಿದೆ. ಬಂದ್‌ಗೆ ೩೨ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ೭ ಲಕ್ಷಕ್ಕೂ ಅಧಿಕ ಖಾಸಗಿ ವಾಹನಗಳ ಸೇವೆ ಸ್ಥಗಿತವಾಗಲಿದೆ.
ಹಲವೆಡೆ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಾಲೆ, ಕಾಲೇಜುಗಳಿಗೆ ನಿಮ್ಮ ಮಕ್ಕಳನ್ನು ಕರೆತರುವ ಜವಾಬ್ದಾರಿ ಪಾಲಕರದ್ದು ಎಂದು ಖಾಸಗಿ ಶಾಲೆಗಳ ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.
ಪ್ರತಿಭಟನಾ ರ‌್ಯಾಲಿ:
ಸೆ.೧೧ ರಂದು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೆಳಗ್ಗೆ ೧೦.೩೦ ಕ್ಕೆ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಲಾಗುತ್ತದೆ. ಈ ರ‌್ಯಾಲಿ ೧೧.೩೦ ಕ್ಕೆ ಸ್ವತಂತ್ರ ಉದ್ಯಾನವನ ತಲುಪಲಿದೆ. ನಂತರ ಸಂಜೆ ೭ ವರೆಗೆ ಅಲ್ಲಿಯೇ ಪ್ರತಿಭಟನೆ ನಡೆಸಲಾಗುತ್ತದೆ.