

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ‘ಬೆಂಗಳೂರು ಬಂದ್’ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಮಂಗಳವಾರ ಭಾಗಶಃ ಸ್ತಬ್ಧವಾಗುವ ಸಾಧ್ಯತೆ ಇದೆ. ಈ ವೇಳೆ ಕೆಲ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರು ಬಂದ್‌ಗೆ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಬೆಂಬಲ ಸೂಚಿಸಿರುವುದಿಂದ ಖಾಸಗಿ ಬಸ್‌ಗಳು ರಸ್ತೆ ಇಳಿಯುವುದು ಅನುಮಾನ.
ಬೃಹತ್ ಪ್ರತಿಭಟನಾ ಮೆರವಣಿಗೆ:
ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಸಂಚಾಲಕ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸೆ. ೨೬ರಂದು ಬೆಳಗ್ಗೆ ೧೧ ಗಂಟೆಗೆ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಪ್ರತಿಭಟನೆ ವೇಳೆ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರದ್ದುಗೊಳಿಸಲು ಆಗ್ರಹ ಮಾಡಲಾಗುತ್ತದೆ. ಜತೆಗೆ ತಮಿಳುನಾಡಿಗೆ ಹರಿಸುವ ನೀರು ಕೂಡಲೆ ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗುತ್ತದೆ. ಬೆಂಗಳೂರು ಬಂದ್‌ಗೆ ೯೨ ಸಂಘಟನೆಗಳಿಂದ ಸಂಪೂರ್ಣ ಬೆಂಬಲ, ೨೦ ಕ್ಕೂ ಹೆಚ್ಚಿನ ಸಂಘಟನೆಗಳಿಂದ ಬಾಹ್ಯ, ನೈತಿಕ ಬೆಂಬಲ ನೀಡಿವೆ.
ಬಂದ್‌ಗೆ ನೀಡಿದ್ದ ಬೆಂಬಲ ವಾಪಸ್:
ಓಲಾ, ಊಬರ್ ಸಂಸ್ಥೆಗಳು ಬಂದ್‌ಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಮಂಗಳವಾರ ಎಂದಿನಂತೆ ಆಟೋ, ಟ್ಯಾಕ್ಸಿ ಸೇವೆ ನೀಡಲಿವೆ. ಹೀಗಾಗಿ ವಿಮಾನ ನಿಲ್ದಾಣಗಳಿಂದ ಬೇರೆಡೆ ತೆರಳುವವರಿಗೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ರೈಲು ನಿಲ್ದಾಣಗಳಿಗೆ ಬಂದು ಬೇರೆಡೆ ತೆರಳಬೇಕಿರುವವರಿಗೂ ಓಲಾ, ಊಬರ್ ಆಟೋ, ಟ್ಯಾಕ್ಸಿ ಸೇವೆ ದೊರೆಯಲಿದೆ. ಜತೆಗೆ ಬಿಎಂಟಿಸಿ ಬಸ್ ಹಾಗೂ ಸರ್ಕಾರಿ ಬಸ್‌ಸೇವೆ ಲಭ್ಯವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ರೈಲು ಸೇವೆ ಎಂದಿನಂತೆ ಇರಲಿದೆ:
ನಮ್ಮ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಮಂಗಳವಾರ ನಮ್ಮ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ದೈನಂದಿನಂತೆ ನಮ್ಮ ಮೆಟ್ರೋ ಸಂಚಾರ ಇರಲಿದೆ. ಸಂದರ್ಭಕ್ಕೆ ತಕ್ಕಂತೆ ಮೇಟ್ರೋ ಕಾರ್ಯಾಚರಣೆ ನಡೆಸಲಿದೆ. ಅಲ್ಲದೇ ಸ್ಥಿತಿಗತಿಯ ಮೇಲೆ ಮೇಟ್ರೋ ಸಂಚಾರದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.
ಆಟೋ ಸೇವೆಯಲ್ಲಿ ವ್ಯತ್ಯಯ!
ಆಟೋ ಅಸೋಸಿಯೇಷನ್ ಬೆಂಗಳೂರು ಬಂದ್‌ಗೆ ಬೆಂಬಲ ಸೂಚಿಸಿದೆ. ಮಂಗಳವಾರ ನಡೆಯಲಿರುವ ಪ್ರತಿಭಟನಾ ರ‌್ಯಾಲಿಯಲ್ಲಿ ಆಟೋ ಚಾಲಕರು ಭಾಗಿಯಾಗಲಿದ್ದಾರೆ. ಹೀಗಾಗಿ ರೈಲ್ವೆ ನಿಲ್ದಾಣಗಳಿಂದ ತೆರಳುವವರಿಗೆ ಸಾಮಾನ್ಯ (ಓಲಾ, ಊಬರ್ ಆಟೋ ಹೊರತುಪಡಿಸಿ) ಆಟೋ ಸೇವೆ ಸಿಗುವುದು ಅನುಮಾನ.
ಭದ್ರತೆಗೆ ೧೫ ಸಾವಿರ ಪೊಲೀಸರ ನಿಯೋಜನೆ:
ನಗರದಲ್ಲಿ ಭದ್ರತೆಗಾಗಿ ಸುಮಾರು ೧೫ ಸಾವಿರ ಪೊಲೀಸರನ್ನು ನಿಯೋಜನೆ ಮಾಡಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ೬೦ ಕೆಎಸ್‌ಆರ್‌ಪಿ, ೪೦ ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಪೊಲೀಸರು, ಕೆಎಸ್‌ಆರ್‌ಪಿ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು, ಹೊಯ್ಸಳ ಪೊಲೀಸರು ಎಲ್ಲರು ಇರಲಿದ್ದಾರೆ. ಸಿವಿಲ್ ಪೊಲೀಸರೊಂದಿಗೆ ಸಿಐಡಿ, ಐಎಸ್‌ಡಿ ಅಧಿಕಾರಿಗಳೂ ಕರ್ತವ್ಯ ನಿರ್ವಹಿಸಲಿದ್ದಾರೆ. ನಗರದಲ್ಲಿ ಒಟ್ಟು ನೂರು ತುಕಡಿ ನಿಯೋಜನೆಯಾಗಲಿವೆ.
ಏನಿರಲ್ಲ?
ಏನಿರುತ್ತೆ ?
ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿವರೆಗೆ ಬೆಂಗಳೂರು ನಗರದಾದ್ಯಂತ ಸೆಕ್ಷನ್ ೧೪೪ರ ಅಡಿ ನಿಷೇಧಾಜ್ಞೆ ಹೇರಲಾಗಿದೆ. ಮಂಗಳವಾರದ ಬಂದ್‌ಗೆ ಅವಕಾಶವಿಲ್ಲ, ಅನುಮತಿ ಕೊಡುವುದಿಲ್ಲ ಎಂದು ಸಂಘಟಕರಿಗೆ ಸೂಚಿಸಿದ್ದೇವೆ. ಜತೆಗೆ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಒತ್ತಾಯ ಪೂರ್ವಕವಾಗಿ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿಸುವಂತಿಲ್ಲ. ಒತ್ತಾಯ ಪೂರ್ವಕ ಬಂದ್ ಮಾಡಿಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ.
ಬಿ.ದಯಾನಂದ್, ನಗರ ಪೊಲೀಸ್ ಆಯುಕ್ತ