

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಬೀಸ್ ನಿರ್ಮೂಲನೆಗಾಗಿ ನಗರದಾದ್ಯಂತ ಮೀಸಲು ವಾಹನದ ಮೂಲಕ ಸಾಮೂಹಿಕ ರೇಬೀಸ್ ಜಾಗೃತಿ ಕೈಗೊಳ್ಳಲಾಗುವುದು ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ವಿಶ್ವ ಝೂನೋಸಿಸ್ ದಿನದ ಭಾಗವಾಗಿ ರೇಬೀಸ್ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಸಂಬಂಧ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಜಾಗೃತಿ ಮೂಡಿಸುವ ವಾಹನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಪ್ರಾಣಿಗಳಿಂದ ವಿವಿಧ ರೀತಿಯ ರೋಗಗಳು ಮನುಷ್ಯರಿಗೆ ಹರಡುತ್ತವೆ. ಮನುಷ್ಯರು ನಾಯಿಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದು, ನಾಯಿ ಕಚ್ಚಿದಾಗ ಹೆಚ್ಚು ಸಮಸ್ಯೆಗಳಾಗುವ ಸಂಭವವಿದೆ. ಆ ಕಾರಣ ಪ್ರಾಣಿಗಳಿಗೆ ನಿರಂತರವಾಗಿ ರೇಬೀಸ್ ಲಸಿಕೆ ಹಾಕಿಸಬೇಕು. ರೇಬೀಸ್ ರೋಗ ನಿಯಂತ್ರಿಸುವ ಉದ್ದೇಶದಿಂದ ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಎಲ್‌ಇಡಿ ವಾಹನದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.
9 ನಿಮಿಷಕ್ಕೊಂದು ಮರಣ:
ರೇಬೀಸ್ ರೋಗದಿಂದ ಪ್ರಪಂಚದಾದ್ಯಂತ ವಾರ್ಷಿಕ ಅಂದಾಜು 59,000ಕ್ಕೂ ಹೆಚ್ಚು ಮರಣ ಸಂಭವಿಸುತ್ತಿದ್ದು, ಶೇ.97ಕ್ಕೂ ಅಧಿಕ ಪ್ರಕರಣಗಳಲ್ಲಿ ಶ್ವಾನ ಕಾರಣವಾಗಿವೆ. ಈ ರೋಗಕ್ಕೆ ಪ್ರತಿ 9 ನಿಮಿಷಕ್ಕೆ ಒಂದು ಮರಣ ಸಂಭವಿಸುತ್ತಿದ್ದು, ಅದರಲ್ಲಿ ಶೇ.40 ಹದಿನೈದು ವರ್ಷಕ್ಕಿಂತ ಕೆಳಗಿನ ಮಕ್ಕಳು ಎಂಬುದು ಆತಂಕದ ಸಂಗತಿಯಾಗಿದೆ.
2030ಕ್ಕೆ ರೇಬೀಸ್‌ಮುಕ್ತಗೊಳಿಸುವ ಗುರಿ:
ಬಿಬಿಎಂಪಿಯ ಪಶುವೈದ್ಯಕೀಯ ಮಹಾವಿದ್ಯಾಲಯ-ಡಬ್ಲ್ಯುಒಎಎಚ್ ರೆಫೆರೆನ್ಸ್ ರೇಬೀಸ್ ರೋಗನಿರ್ಣಯ ಪ್ರಯೋಗಾಲಯ, ಚಾರ್ಲೀಸ್ ಮತ್ತು ಡಬ್ಲ್ಯುವಿಎಸ್- ಮಿಷನ್ ರೇಬೀಸ್ ಸಂಸ್ಥೆಗಳೊಂದಿಗೆ 2030ರ ವೇಳೆಗೆ ರೇಬೀಸ್ ನಿರ್ಮೂಲನೆ ಮಾಡಲು ಮತ್ತು ಬೆಂಗಳೂರು ನಗರವನ್ನು ರೇಬೀಸ್‌ಮುಕ್ತಗೊಳಿಸಲು ಕೆಲಸ ಮಾಡುತ್ತಿದೆ. ಇದಕ್ಕಾಗಿ ನಾಯಿಗಳ ಸಾಮೂಹಿಕ ಲಸಿಕಾಕರಣ ಮತ್ತು ಅತ್ಯಾಧುನಿಕ ಹಾಗೂ ಸುಸಜ್ಜಿತ ರೇಬೀಸ್ ಸರ್ವೇಕ್ಷಣೆ ಅಳವಡಿಸಿಕೊಳ್ಳಲಾಗಿದೆ.
ಈ ವೇಳೆ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ಚಂದ್ರಯ್ಯ, ಮುಖ್ಯ ಆರೋಗ್ಯಾಧಿಕಾರಿ ಡಾ. ಎಸ್.ಎಸ್ ಮದನಿ, ಮಿಷನ್ ರೇಬೀಸ್ ಸಂಸ್ಥೆಯ ನಿರ್ದೇಶಕ ಡಾ. ಬಾಲಾಜಿ ಚಂದ್ರಶೇಖರ್, ಸುಧಾ ನಾರಾಯಣನ್ ಮತ್ತಿತರರು ಹಾಜರಿದ್ದರು.
ವಿಶ್ವ ಝೂನೋಸಿಸ್ ದಿನದ ಕುರಿತು:
ಝೂನೋಸಸ್ ಎಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳು. ಪ್ರಾಣಿಗಳಲ್ಲಿರುವ ವೈರಸ್, ಬ್ಯಾಕ್ಟೀರಿಯಾ ಮತ್ತು ಇತರೆ ಸೂಕ್ಷ್ಮಾಣುಗಳಿಂದ ನೇರ ಸಂಪರ್ಕ, ಗಾಳಿ, ನೀರು, ಆಹಾರ, ಪ್ರಾಣಿಗಳ ಜೊಲ್ಲು ಮೂಲಕ ಮನುಷ್ಯರಿಗೆ ಸೋಂಕು ತಗಲುತ್ತವೆ. ಮನುಷ್ಯರಿಗೆ ಗೊತ್ತಿರುವ ಶೇ. 60ಕ್ಕೂ ಹೆಚ್ಚು ರೋಗಗಳ ಪ್ರಾಣಿಜನ್ಯವಾಗಿವೆ. ಈ ದಿನವು ಮನುಷ್ಯರು ಮತ್ತು ಪ್ರಾಣಿಗಳ ರೋಗಗಳು ಮತ್ತು ಅವುಗಳ ಆರೋಗ್ಯದ ಅಂತರ ಸಂಬಂಧದ ಪ್ರಾಮುಖ್ಯತೆ ಸೂಚಿಸುತ್ತದೆ. ಈ ದಿನವು ಏಕೀಕೃತ ಆರೋಗ್ಯದ ಮೂಲಕ ಪ್ರಾಣಿಜನ್ಯ ರೋಗಗಳ ನಿಯಂತ್ರಣದ ಮಹತ್ವವನ್ನು ಎತ್ತಿ ಹಿಡಿಯುತ್ತದೆ.