

ಬೆಂಗಳೂರು: ಸಿಲಿಕಾನ್ ಸಿಟಿ ಹೆಗ್ಗಳಿಕೆ ಹೊರತಾಗಿಯೂ ಸ್ವಚ್ಛ ನಗರ ಗರಿಮೆ ಪಡೆಯಲು ಹೆಣಗುತ್ತಿರುವ ಬೆಂಗಳೂರಿನಲ್ಲಿ ಬಿಬಿಎಂಪಿ ನಡೆಸುತ್ತಿರುವ ಸ್ವಚ್ಛತಾ ಕಾರ್ಯಗಳು ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಜನರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನಡೆಸುತ್ತಿರುವ ಸ್ವಚ್ಛ ಸರ್ವೆಕ್ಷಣೆ- 2020ರ ಜಾರಿ ಕುರಿತು ದೂರವಾಣಿ ಮೂಲಕ ನಾಗರಿಕರು ನೀಡಿರುವ ಪ್ರತಿಕ್ರಿಯೆಯಲ್ಲಿ ಬಿಬಿಎಂಪಿ ಕಾರ್ಯನಿರ್ವಹಣೆ ಕುರಿತು ನಕಾರಾತ್ಮಕ ಮಾಹಿತಿ ನೀಡಿದ್ದಾರೆ. ಪ್ರತಿಹಂತದಲ್ಲೂ ಜನರು ನೀಡುವ ಅಂಕಗಳು ಅಂತಿಮ ರ‍್ಯಾಂಕಿಂಗ್ ಮೇಲೆ ಪ್ರಭಾವ ಬೀರುವುದರಿಂದ ಸಾರ್ವಜನಿಕರ ವಿಶ್ವಾಸ ಗಳಿಸುವತ್ತ ಪಾಲಿಕೆ ಇನ್ನಷ್ಟು ಶ್ರಮಿಸಬೇಕು ಎಂಬುದು ಸ್ಪಷ್ಟವಾಗಿದೆ.
ಲೀಗ್ ಹಂತದ ಸರ್ವೆಕ್ಷಣೆ: ಇಡೀ ವರ್ಷ ಸರ್ವೆಕ್ಷಣೆ ನಡೆಸಿ ಒಮ್ಮೆಲೇ ಅಂತಿಮ ಫಲಿತಾಂಶ ಪ್ರಕಟಿಸುವ ವಿಧಾನವನ್ನು ಕೇಂದ್ರ ಸರ್ಕಾರ 2020ರ ಸರ್ವೆಕ್ಷಣೆಯಲ್ಲಿ ಬದಲಿಸಿದೆ. ಅದರ ಬದಲು ತ್ರೖೆಮಾಸಿಕ ಆಧಾರದಲ್ಲಿ ಮೂರು ಬಾರಿ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಸದ್ಯ ಎರಡು ತ್ರೖೆಮಾಸಿಕಗಳ ಫಲಿತಾಂಶ ಪ್ರಕಟವಾಗಿದೆ. ಯಾವುದೇ ನಗರ ಪ್ರಾರಂಭಿಕ ಹಂತದಲ್ಲಿ ಹಿಂದೆ ಬಿದ್ದಿದ್ದರೆ ಮುಂದಿನ ಹಂತಗಳಲ್ಲಿ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಅದರಂತೆ ಕಳೆದ ಏಪ್ರಿಲ್ನಿಂದ ಜೂನ್ವರೆಗೆ ಪ್ರಕಟಿಸಿದ್ದ ಫಲಿತಾಂಶದಲ್ಲಿ ಬೆಂಗಳೂರು 2,768ನೇ ಸ್ಥಾನ ಪಡೆದಿತ್ತು. ಜುಲೈನಿಂದ ಸೆಪ್ಟೆಂಬರ್ವರೆಗಿನ 2ನೇ ತ್ರೖೆಮಾಸಿಕದಲ್ಲಿ ಸ್ಥಾನವನ್ನು ಉತ್ತಮಪಡಿಸಿಕೊಂಡು 910ರಲ್ಲಿದೆ. ಒಟ್ಟಾರೆ ಅಂಕದಲ್ಲಿ ಏರಿಕೆಯಾಗಿದ್ದರೂ ಸಾರ್ವಜನಿಕರು ನೀಡುವ ಅಂಕದಲ್ಲಿ ಕುಸಿತವಾಗಿದೆ.
ಬಿಬಿಎಂಪಿ ಬಗ್ಗೆ ಮಾಧ್ಯಮಗಳಲ್ಲಿ ನಕಾರಾತ್ಮಕ ಸುದ್ದಿಗಳೇ ಬರುವ ಪರಿಣಾಮ ಸಾರ್ವಜನಿಕರ ಮೇಲೆ ಬೀರಿದೆ. ಮಾಹಿತಿ- ಜಾಗೃತಿ-ಸಂವಹನ (ಐಇಸಿ) ಚಟುವಟಿಕೆ ಮೂಲಕ ಸಾರ್ವಜನಿಕರ ಜತೆಗಿನ ಸಂಪರ್ಕಕ್ಕೆ 1.53 ಕೋಟಿ ರೂ. ತೆಗೆದಿರಿಸಿದ್ದು, ಸದ್ಯದಲ್ಲೇ ಏಜೆನ್ಸಿ ಮೂಲಕ ಆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತದೆ. | ಬಿ.ಎಚ್. ಅನಿಲ್ಕುಮಾರ್ ಬಿಬಿಎಂಪಿ ಆಯುಕ್ತ
ನಾಗರಿಕರಿಂದ ಖಾತ್ರಿ
ಪ್ರತಿ ತ್ರೖೆಮಾಸಿಕಕ್ಕೂ ಕೇಂದ್ರ ಸರ್ಕಾರ ಒಟ್ಟು 38 ವಿಭಾಗಗಳನ್ನು ರಚಿಸಿದ್ದು ಗರಿಷ್ಠ 2 ಸಾವಿರ ಗರಿಷ್ಠ ಅಂಕ ನಿಗದಿಪಡಿಸಿದೆ. ಈ ಪೈಕಿ ನಗರಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಶ್ನೆಗಳಿಗೆ ಉತ್ತರಿಸಬಹುದು. ಗರಿಷ್ಠ ಅಂಕಗಳ ಪೈಕಿ ಎಷ್ಟು ಅಂಕ ನೀಡಬಹುದು ಎಂದು ಪಾಲಿಕೆಯೇ ಸ್ವಮೌಲ್ಯಮಾಪನ ಮಾಡಿಕೊಳ್ಳುತ್ತದೆ. ಉದಾಹರಣೆಗೆ ಮನೆಗಳಿಂದ ಕಸ ಸಂಗ್ರಹಿಸುವ ಕಾರ್ಯಕ್ಕೆ ಗರಿಷ್ಠ 100 ಅಂಕವಿದ್ದರೆ ಬಿಬಿಎಂಪಿ 100 ಅಂಕವನ್ನೂ ಪಡೆಯುವ ಇಚ್ಛೆ ವ್ಯಕ್ತಪಡಿಸಿತ್ತು. ಆದರೆ, ಈ ಕುರಿತು ನಗರದ ಸಾರ್ವಜನಿಕರಿಗೆ ಕರೆ ಮಾಡಿದಾಗ, ಕೇವಲ 68.08 ಅಂಕ ನೀಡಿದ್ದಾರೆ.
ಎರಡೂ ತ್ರೖೆಮಾಸಿಕದಲ್ಲಿ ಶೇ.87 ಅಂಕ
ಒಟ್ಟು 38 ಪ್ರಶ್ನೆಯಲ್ಲಿ ಮೊದಲ ತ್ರೖೆಮಾಸಿಕದಲ್ಲಿ ಬಿಬಿಎಂಪಿ 15 ಪ್ರಶ್ನೆಗಳಿಗೆ ಉತ್ತರಿಸಿತ್ತು. 735 ಗರಿಷ್ಠ ಅಂಕದಲ್ಲಿ 492.5 ಅಂಕ ಬರಬೇಕೆಂದು ಸ್ವಯಂ ಮೌಲ್ಯಮಾಪನ ಮಾಡಿಕೊಂಡಿತ್ತು. ಆದರೆ ಸಾರ್ವಜನಿಕರಿಗೆ ಕರೆ ಮಾಡಿದ ನಂತರದಲ್ಲಿ ಈ ಅಂಕ 392.36ಕ್ಕೆ (ಶೇ.79) ಕುಸಿದಿದೆ. ಅದೇ ರೀತಿ ಎರಡನೇ ತ್ರೖೆಮಾಸಿಕದಲ್ಲಿ ಬಿಬಿಎಂಪಿ ಒಟ್ಟು 1,490 ಅಂಕದ 26 ಪ್ರಶ್ನೆಗಳಿಗೆ ಉತ್ತರಿಸಿತ್ತು. ಇದರಲ್ಲಿ 1235.16 ಅಂಕ ಬರಬೇಕೆಂದು ಸ್ವಯಂಮೌಲ್ಯಮಾಪನ ಮಾಡಿಕೊಂಡಿತ್ತು. ಆದರೆ ಸಾರ್ವಜನಿಕರನ್ನು ಸಂರ್ಪಸಿದಾಗ ಈ ಅಂಕ 903.05ಕ್ಕೆ (ಶೇ.73) ಕುಸಿದಿದೆ. ಮೊದಲ ತ್ರೖೆಮಾಸಿಕಕ್ಕಿಂತಲೂ ಬೆಂಗಳೂರಿಗರು ಕಡಿಮೆ ಅಂಕವನ್ನು ಬಿಬಿಎಂಪಿಗೆ ನೀಡಿದ್ದಾರೆ. ಕಳೆದ ಮೂರು ವರ್ಷದಿಂದ ಸ್ವಚ್ಛತೆಯಲ್ಲಿ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆ ಪಡೆದಿರುವ ಮಧ್ಯ ಪ್ರದೇಶದ ಇಂದೋರ್ನಲ್ಲಿ ಸಾರ್ವಜನಿಕರು ಅಲ್ಲಿನ ಪಾಲಿಕೆಗೆ ಎರಡೂ ತ್ರೖೆಮಾಸಿಕದಲ್ಲಿ ಶೇ.87 ಅಂಕ ನೀಡಿದ್ದಾರೆ.
ಕೇಳಲಾದ 12 ಪ್ರಶ್ನೆಗಳು
1. ನಿಮ್ಮ ಮನೆಯಿಂದ ಪ್ರತಿದಿನ ತ್ಯಾಜ್ಯ ಸಂಗ್ರಹಿಸಲಾಗುತ್ತದೆಯೇ?
2. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡುವಂತೆ ನಿಮ್ಮನ್ನು ಕೇಳಲಾಗಿದೆಯೇ?
3. ನಿಮ್ಮ ಪರಿಸರದ ಸ್ವಚ್ಛತೆ ತೃಪ್ತಿ ತಂದಿದೆಯೇ?
4. ನಿಮ್ಮ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿದೆಯೇ?
5. ತ್ಯಾಜ್ಯವನ್ನು ಕಡಿಮೆ ಮಾಡುವ ಕ್ರಮಗಳನ್ನು ನೋಡಿದ್ದೀರ?
6. ಎರಡು ದಿನಕ್ಕಿಂತ ಹೆಚ್ಚು ಅವಧಿಗೆ ಕಟ್ಟಡ ತ್ಯಾಜ್ಯ ಬಿದ್ದಿರುತ್ತದೆಯೇ?
7. ಮನೆಯಲ್ಲೆ ಗೊಬ್ಬರ ತಯಾರಿಸುವಿಕೆಯ ಬಗ್ಗೆ ನಿಮಗೆ ತಿಳಿದಿದೆಯೇ?
8. ನಿಮ್ಮ ಸಮೀಪದ ಶೌಚಗೃಹಗಳನ್ನು ಗೂಗಲ್ ಮ್ಯಾಪ್ನಲ್ಲಿ ಹುಡುಕಬಹುದು ಎಂಬುದು ನಿಮಗೆ ಗೊತ್ತೇ?
9. ನಿಮ್ಮ ನಗರದಲ್ಲಿ ವಾಣಿಜ್ಯ ಉದ್ಯಮಕ್ಕೆ ರ್ಯಾಂಕ್ ನೀಡುವ ವಿಚಾರ ಗೊತ್ತಿದೆಯೇ?
10. ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸಲು
ನಿಮಗೆ ಅವಕಾಶ ಸಿಕ್ಕಿದೆಯೇ?
11. ನಿಮ್ಮ ನಗರ ಸ್ವಚ್ಛ ಸರ್ವೆಕ್ಷಣೆಯಲ್ಲಿ ಭಾಗವಹಿಸುತ್ತಿದೆ ಎಂಬುದು ಗೊತ್ತೇ?
12 ನಿಮ್ಮ ನಗರದ ಸಾರ್ವಜನಿಕ/ಸಮುದಾಯ ಶೌಚಗೃಹಗಳು ಸ್ವಚ್ಛವಾಗಿವೆಯೇ?
| ರಮೇಶ ದೊಡ್ಡಪುರ