ಮನ್‌ಮುಲ್ ಒಕ್ಕೂಟದ ಸೌಲಭ್ಯ ಪಡೆಯಿರಿ

1-pnp 2
ಪಾಂಡವಪುರ ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ವಿವಿಧ ಯೋಜನೆಯಡಿ ಹಾಲು ಉತ್ಪಾದಕರಿಗೆ ಚೆಕ್ ವಿತರಿಸಿದರು.
Published on

ಪಾಂಡವಪುರ: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮನ್‌ಮುಲ್ ಒಕ್ಕೂಟ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಲಹೆ ನೀಡಿದರು.

ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ರಾಸುಗಳ ಮಾಲೀಕರಿಗೆ ವಿಮೆ ಚೆಕ್, ರೈತ ಕಲ್ಯಾಣ ನಿಧಿ ಹಾಗೂ ಗುಂಪು ವಿಮಾ ಯೋಜನೆಯಡಿ ರೈತರಿಗೆ ಚೆಕ್‌ಗಳನ್ನು ವಿತರಣೆ ಮಾಡಿ ಮಾತನಾಡಿದರು.

ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಮತ್ತು ಹಾಲು ಕರೆಯುವ ಯಂತ್ರಗಳಿಗೆ ಒಕ್ಕೂಟದಿಂದ ಶೇ.50 ಸಬ್ಸಿಡಿ ನೀಡಲಾಗುತ್ತಿದೆ. ಜತೆಗೆ ರಾಸುಗಳ ವಿಮೆ ಹಣವನ್ನು ಶೇ.50 ರಷ್ಟು ಭರಿಸುತ್ತದೆ. ರೈತರು ಉಳಿಕೆ ಹಣವನ್ನು ಪಾವತಿಸಿ ರಾಸುಗಳನ್ನು ವಿಮೆ ವ್ಯಾಪ್ತಿಗೆ ತರಬೇಕು. ರಾಸುಗಳು ಆಕಸ್ಮಿಕವಾಗಿ ಮೃತಪಟ್ಟರೆ 50 ರಿಂದ 60 ಸಾವಿರ ರೂ.ವರೆಗೂ ವಿಮೆ ಹಣ ಸಿಗುತ್ತದೆ. ಇಲ್ಲವಾದರೆ ಬಿಡಿಗಾಸು ಸಿಗುವುದಿಲ್ಲ. ರಾಸು ಮೃತಪಟ್ಟರೆ ಹೈನುಗಾರಿಕೆಯಿಂದ ಮನೆಯ ಆರ್ಥಿಕತೆ ನಿಭಾಯಿಸುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಹೀಗಾಗಿ ಪ್ರತಿಯೊಬ್ಬರೂ ವಿಮೆ ಮಾಡಿಸುವಂತೆ ಮನವಿ ಮಾಡಿದರು.
ಹಾಲು ಉತ್ಪಾದಕರು ಮತ್ತು ಷೇರುದಾರರು ಗುಂಪು ವಿಮೆ ಮಾಡಿಸಬೇಕು. ಉತ್ಪಾದಕರು 200 ಹಾಗೂ ಷೇರುದಾರರು 400 ರೂ. ಪಾವತಿಸಿದರೆ ಕುಟುಂಬದ ಸದಸ್ಯರಿಗೆ 50 ಸಾವಿರ ರೂ. ಪರಿಹಾರ ಸಿಗುತ್ತದೆ. ಮೃತರ ಕುಟುಂಬಗಳಿಗೆ ರೈತ ಕಲ್ಯಾಣ ಟ್ರಸ್ಟ್‌ನಿಂದ ಈ ಹಿಂದೆ 10 ಸಾವಿರ ರೂ. ನೀಡಲಾಗುತ್ತಿತ್ತು. ಈಗ ಆ ಹಣವನ್ನು 15 ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದರು.

ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಒಕ್ಕೂಟ ನೀಡುತ್ತಿರುವ ಸವಲತ್ತುಗಳ ಬಗ್ಗೆ ಡೇರಿ ಕಾರ್ಯದರ್ಶಿಗಳು ಉತ್ಪಾದಕರಿಗೆ ಮಾಹಿತಿ ನೀಡಬೇಕು. ಉತ್ಪಾದಕರು ಒಕ್ಕೂಟದಿಂದ ಸಾಕಷ್ಟು ಸವಲತ್ತು ಸಿಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ತಾಲೂಕಿನಲ್ಲಿ 1.2 ಲಕ್ಷ ಹಾಲು ಉತ್ಪಾದಕರಿದ್ದು, ಕೇವಲ ಮೂವರು ಮಾರ್ಗವಿಸ್ತರಣಾಧಿಕಾರಿಗಳು ಇದ್ದಾರೆ. ಹೀಗಾಗಿ ಕಾರ್ಯದರ್ಶಿಗಳು ಒಕ್ಕೂಟದ ನೀಡುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಮಾರ್ಗವಿಸ್ತರಾಣಾಧಿಕಾರಿಗಳಾದ ಎಚ್.ಎನ್.ಉಷಾ, ಜಗದೀಶ್, ಪ್ರಜ್ವಲ್, ನಾಗೇಂದ್ರಕುಮಾರ್, ಮಾರುಕಟ್ಟೆ ಕ್ಷೇತ್ರಾಧಿಕಾರಿ ಎಚ್.ಸಿ.ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net