ಬೆಳೆ ಸಮೀಕ್ಷೆ ಆಪ್​ನಿಂದ ಅನುಕೂಲ: ರೈತರಿಗೆ ಸಹಾಯಕ ಕೃಷಿ ನಿರ್ದೇಶಕಿ ಜಿ. ಶಾಂತಾಮಣಿ ಸಲಹೆ

Farmer meet agriculture officer meet
Published on

ಬ್ಯಾಡಗಿ: ರೈತರು ಮುಂಗಾರು ಬೆಳೆ ಸಮೀಕ್ಷೆ 2023 ಆಪ್ ಬಳಸಿಕೊಂಡು ತಮ್ಮ ಹೊಲದ ಬೆಳೆಯನ್ನು ಅಳವಡಿಸುವ (ಜಿಪಿಎಸ್ ಅಪ್​ಲೋಡ್) ಮೂಲಕ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕಿ ಜಿ. ಶಾಂತಾಮಣಿ ತಿಳಿಸಿದರು.

ತಾಲೂಕಿನ ಕಲ್ಲೆದೇವರು, ಬುಡಪನಹಳ್ಳಿ, ಗುಂಡೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ, ರೈತರಿಗೆ ಮುಂಗಾರು ರೈತರ ಬೆಳೆ ಸಮೀಕ್ಷೆ 2023 ಆಪ್ ಕುರಿತು ಮಾಹಿತಿ ನೀಡಿದರು.

ಸರ್ಕಾರ ರೈತರಿಗಾಗಿ ಬೆಳೆ ಆಪ್ ಜಾರಿಗೊಳಿಸುವ ಮೂಲಕ ಆನ್​ಲೈನ್, ಮೊಬೈಲ್ ಇತ್ಯಾದಿಗಳ ಮೂಲಕ ಸೌಲಭ್ಯ ಕಲ್ಪಿಸಿದೆ. ಇದರಿಂದ ರೈತರು ಬ್ಯಾಂಕ್ ಸಾಲ, ಬೆಳೆ ವಿಮೆ ಕಂತು ತುಂಬಲು, ಬೆಳೆ ಹಾನಿ ಸೇರಿದಂತೆ ಪಾಕೃತಿಕ ವಿಕೋಪದಂತಹ ಘಟನೆಗಳು ಜರುಗಿದಾಗ ಇದರಲ್ಲಿ ಮಾಹಿತಿ ಲಭ್ಯವಾಗಲಿದೆ. ಎರಡು ವರ್ಷಗಳಿಂದ ಮಾಹಿತಿ ನೀಡುತ್ತಿದ್ದರೂ ಕೆಲ ರೈತರು ಇನ್ನೂತನಕ ಮಾಹಿತಿ ಅಪ್​ಲೋಡ್ ಮಾಡಿಲ್ಲ. ಇದರಿಂದ ಕೆಲವೊಮ್ಮೆ ಸೌಲಭ್ಯ ವಂಚಿತವಾಗುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರ ಹಾಗೂ ಇಲಾಖೆ ಸೂಚನೆ, ನಿರ್ದೇಶನಗಳನ್ನು ಎಲ್ಲ ರೈತರು ಪಾಲಿಸಬೇಕು ಎಂದು ಸಲಹೆ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಸಹಾಯಕ ಕಾರ್ಯಾಲಯದ ಸಿಬ್ಬಂದಿಯಿಂದ ಮಾಹಿತಿ ಪಡೆಯುವಂತೆ ತಿಳಿಸಿದರು.

ರೋಗ ಬಾಧೆಗೆ ಮುಂಜಾಗೃತೆ:

ಮಕ್ಕೆಜೋಳದ ಎಲೆಗೆ ಹಳದಿರೋಗ ಕಾಣಿಸಿಕೊಂಡಲ್ಲಿ, ರೋಗ ನಿಯಂತ್ರಿಸಲು ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳಾದ 13-0-45 ಮತ್ತು 19-19-19 ಇವುಗಳನ್ನು ಒಂದು ಲೀಟರ್ ನೀರಿಗೆ ಬೆಳೆ ಸಣ್ಣದಿದ್ದಲ್ಲಿ 2 ಗ್ರಾಮ ಹಾಗೂ ಬೆಳೆ ಒಂದು ತಿಂಗಳು ದಾಟಿದ್ದಲ್ಲಿ 5 ಗ್ರಾಮದೊಂದಿಗೆ ಮೈಕ್ರೋನ್ಯೂಟ್ರಯೆಂಟ್ ಹಾಕಿ ಸಿಂಪಡಿಸಬೇಕು. 12ರಿಂದ 15 ದಿನಗಳಲ್ಲಿ ರೋಗ ನಿಯಂತ್ರಣವಾಗಲಿದೆ.

ಲದ್ದಿ ಹುಳುವಿನ ಬಾಧೆ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ ಅರ್ಧ ಗ್ರಾಮ ಇಮಾಮೇಕ್ಟೀನ್ ಬೆಂಜೋಯೇಟ್ ಕೀಟನಾಶಕವನ್ನು ಗಿಡದ ಮೇಲೆ ಸಿಂಪಡಿಸಬೇಕು ಅಥವಾ ಮೆಟಾರೈಜಿಯಂ ರಿಲೇ ಜೈವಿಕ ಪೀಡೆನಾಶಕವನ್ನು 3 ಗ್ರಾಂ ಬೆರೆಸಿ ಸುಳಿಯಲ್ಲಿ ಬಿಡುವುದರಿಂದ 4 ರಿಂದ 5 ದಿನಗಳಲ್ಲಿ ಲದ್ದಿ ಹುಳುವಿನ ಕಾಟ ತಪ್ಪಲಿದೆ ಎಂದರು.

ಕೃಷಿ ಸಹಾಯಕ ಅಧಿಕಾರಿ ಕೆ.ಎ. ಹಿರೇಹಾಳ, ಡಿ. ಲಾವಣ್ಯ, ಕೆ. ಗಾಯತ್ರಿ, ಭಾಗ್ಯಲಕ್ಷ್ಮೀ ಪಟ್ಟಣಶೆಟ್ಟಿ, ಸಿದ್ದಪ್ಪ ಎಂ.ಎನ್., ಶಿವಯ್ಯ ಹಿರೇಮಠ ಹಾಗೂ ವಿವಿಧ ರೈತರು, ಕೂಲಿಕಾರ್ವಿುಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net