ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿ

21KKNR-01
ಕುಕನೂರಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯು ಇಲಾಖೆವಾರು ಆಯೋಜಿಸಿದ್ದ ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಕಾಸಿಂಸಾಬ್ ತಳಕಲ್, ತಾಪಂ ಇಒ ಸಂತೋಷ ಬಿರಾದಾರ ಇತರರಿದ್ದರು.
Published on

ಕುಕನೂರು; ಗ್ಯಾರಂಟಿ ಯೋಜನೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಂತೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯು ಇಲಾಖೆವಾರು ಆಯೋಜಿಸಿದ್ದ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

ರಾಜ್ಯ ಸರ್ಕಾರ ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ ಮತ್ತು ಶಕ್ತಿ ಯೋಜನೆ ಜಾರಿಗೆ ತಂದಿದೆ. ಹೊಸ ಯೋಜನೆಗಳ ಅನುಷ್ಠಾನ ವೇಳೆ ಸಮಸ್ಯೆಗಳು ಬರುವುದು ಸಾಮಾನ್ಯ. ಅವುಗಳನ್ನು ಪರಿಹರಿಸಿ ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ 59,783 ಕುಟುಂಬಗಳು ನೋಂದಣಿಗೊಂಡಿದ್ದು, 328 ಫಲಾನುಭವಿಗಳಿಗೆ ಮಾತ್ರ ಸಮಸ್ಯೆಯಾಗಿದೆ. ಅದರಲ್ಲಿ 39 ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದಾರೆ. 42 ಜಿಎಸ್‌ಟಿ ಪಾವತಿದಾರರು, 61 ಫಲಾನುಭವಿಗಳಿಗೆ ಬ್ಯಾಂಕ್ ಅಕೌಂಟ್ ಸಮಸ್ಯೆ ಇದೆ. 186 ಫಲಾನುಭವಿಗಳ ಸಮಸ್ಯೆ ಪರಿಹರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದರು.

ಆಹಾರ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ಅವಳಿ ತಾಲೂಕಿನಲ್ಲಿ 53849 ಅನ್ನಭಾಗ್ಯ ಯೋಜನೆ ಕಾರ್ಡ್‌ಗಳು ಇದ್ದು, 2,08,804 ಫಲಾನುಭವಿಗಳು ಇದ್ದಾರೆ. ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಮೊತ್ತ 172 ರೂ. ಕುಟುಂಬದ ಮುಖ್ಯಸ್ಥರ ಖಾತೆಗೆ ಪಾವತಿಸಲಾಗುತ್ತಿದೆ.

918 ಪಡಿತರ ಜೀಟಿಗಳು ಮಾತ್ರ ಸಮಸ್ಯೆ ಇವೆ. ಅದರಲ್ಲಿ 52 ಪಡಿತರ ಚೀಟಿ ಮುಖ್ಯಸ್ಥರು ಮರಣ ಹೊಂದಿದ್ದಾರೆ. 638 ಪಡಿತರ ಚೀಟಿಗೆ ಆಧಾರ್ ನಂಬರ್ ಸಮಸ್ಯೆ, 228 ಎನ್‌ಪಿಸಿಐ ಸಮಸ್ಯೆ ಇದೆ ಎಂದು ಮಾಹಿತಿ ನೀಡಿದರು.

ಶಕ್ತಿ ಯೋಜನೆಯಡಿ ಕುಕನೂರು ತಾಲೂಕಿನ 64.62 ಲಕ್ಷ ಮಹಿಳಾ ಫಲಾನುಭವಿಗಳು ಸಂಚಾರ ಮಾಡಿದ್ದಾರೆ ಎಂದು ಕೆಕೆಆರ್‌ಟಿಸಿ ಅಧಿಕಾರಿಗಳು ತಿಳಿಸಿದರು. ಯುವನಿಧಿಗೆ 2023ರ ನಂತರ ಪದವಿ ಮುಗಿಸಿದ 3011ಯುವಕರು ನೋಂದಣಿಯಾಗಿದ್ದು, ನಿಯಮಾನುಸಾರ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಪಾವತಿ ಮಾಡಲಾಗುತ್ತಿದೆ ಎಂದು ಕೌಶಲ ಯುವ ನಿಧಿ ಅಧಿಕಾರಿಗಳು ಸಭೆಗೆ ತಿಳಿಸಿದರು.

ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕಾಸಿಂಸಾಬ್ ತಳಕಲ್, ತಾಪಂ ಇಒ ಸಂತೋಷ ಬಿರಾದಾರ, ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು, ಯಲಬುರ್ಗಾ-ಕುಕನೂರ ತಾಲೂಕುಗಳ ಅನುಷ್ಠಾನ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net