ಮಾ.4ಕ್ಕೆ ಫಲಾನುಭವಿಗಳ ಸಮಾವೇಶ

CTD 25 DM MEETING-03
Published on

ಚಿತ್ರದುರ್ಗ: ನಗರದ ವಿಜ್ಞಾನ ಕಾಲೇಜು ಮೈದಾನದಲ್ಲಿ ಮಾರ್ಚ್ 4ರಂದು ಫಲಾನುಭವಿಗಳ ಸಮಾವೇಶ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಜಿಪಂ ಸಭಾಂಗಣದಲ್ಲಿ ಶನಿವಾರ ಸಮಾವೇಶ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಸಮಾವೇಶ ಉದ್ಘಾಟಿಸಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 5 ಲಕ್ಷ ಕುಟುಂಬಗಳಿದ್ದು, ಅಂದಾಜು 12 ಲಕ್ಷ ಜನರು ರಾಜ್ಯ, ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಲಾಭ ಪಡೆದಿದ್ದಾರೆ ಎಂದರು.

ಜಿಲ್ಲೆಯ ಪ್ರತಿ ಕುಟುಂಬದಲ್ಲಿ 2-3 ಜನರು ಯಾವುದಾದರೂ ಒಂದು ಯೋಜನೆ ಫಲಾನುಭವಿಗಳಾಗಿದ್ದು, ದುರ್ಗದ ಸಮಾವೇಶದಲ್ಲಿ 75 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ತಮ್ಮ ಇಲಾಖಾ ವ್ಯಾಪ್ತಿಯ ಫಲಾನುಭವಿಗಳನ್ನು ಗುರುತಿಸಿ ಕರೆತರಬೇಕು. ಸವಲತ್ತುಗಳಿಂದ ವಂಚಿತರಾಗಿರುವ ಅರ್ಹರನ್ನು ಗುರುತಿಸಿ ಅವರಿಗೂ ಯೋಜನೆಗಳ ಲಾಭ ತಲುಪಿಸಬೇಕು. ಸಮಾವೇಶದ ಯಶಸ್ವಿಗೆ ಸಮಿತಿಗಳನ್ನು ರಚಿಸಬೇಕು. ಸೂಕ್ತ ಆಸನ, ಮಧ್ಯಾಹ್ನದ ಊಟದ ವ್ಯವಸ್ಥೆಯಾಗಬೇಕು. ಫಲಾನುಭವಿಗಳನ್ನು ಕರೆತರುವಲ್ಲಿ ನಿರ್ಲಕ್ಷೃ ತೋರುವಂತಿಲ್ಲವೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಶಾಸಕರಾದ ಎಂ.ಚಂದ್ರಪ್ಪ,ಜಿ.ಎಚ್.ತಿಪ್ಪಾರೆಡ್ಡಿ,ಜಿ.ಪಂ.ಸಿಇಒ ಎಂ.ಎಸ್.ದಿವಾಕರ,ಎಸ್ಪಿ ಕೆ.ಪರುಶುರಾಮ,ಎಡಿಸಿ ಟಿ.ಜವರೇಗೌಡ,ಉಪವಿಭಾಗಧಿಕಾರಿ ಆರ್.ಚಂದ್ರಯ್ಯ ಮತ್ತಿತರ ಅಧಿಕಾರಿಗಳಿದ್ದರು.

*ಗೈರಾದವರಿಗೆ ನೋಟಿಸ್

ಪೂರ್ವಭಾವಿ ಸಭೆಗೆ ಗೈರಾದ ಹಲವು ಅಧಿಕಾರಿಗಳಿಗೆ ನೋಟಿಸ್ ನೀಡಿ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರಿಗೆ ಸಚಿವರು ಸೂಚಿಸಿದರು. ಹಿರಿಯೂರು ತಹಸೀಲ್ದಾರ್, ನಗರಸಭೆ ಆಯುಕ್ತರು ಗೈರಾಗಿದ್ದನ್ನು ಗಮನಿಸಿದ ಶಾಸಕಿ ಪೂರ್ಣಿಮಾ, ಅವರಿಬ್ಬರ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net