

ಮಂಡ್ಯ: ರಾಜ್ಯದಲ್ಲಿ 20 ಲಕ್ಷ ರೈತರಿಗೆ ಅಂದಾಜು 16 ಸಾವಿರ ಕೋಟಿ ರೂ ಬಡ್ಡಿರಹಿತ ಸಾಲ ನೀಡಲಾಗಿದೆ. ಅದರ ಬಡ್ಡಿಯನ್ನು ಸರ್ಕಾರ ಡಿಸಿಸಿ ಬ್ಯಾಂಕಿಗೆ ಪಾವತಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಮೈಷುಗರ್ ಕಾರ್ಖಾನೆಯ ಮೈದಾನದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ಎಂಡಿಸಿಸಿ ಬ್ಯಾಂಕ್‌ನಿಂದ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ವಿತರಣೆ ಹಾಗೂ ಮಾಹಿತಿ ನೀಡುವ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ 112 ಕೋಟಿ ರೂಗಳನ್ನ 5 ಲಕ್ಷದೊಳಗಿನ ಸಾಲವನ್ನು ಬಡ್ಡಿ ರಹಿತವಾಗಿ ನೀಡಲಾಗುತ್ತಿದೆ. 5 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತಿದೆ ಎಂದರು.
ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯ ಸೌಲಭ್ಯವನ್ನು ಇದುವರೆಗೆ ಜಿಲ್ಲೆಯಲ್ಲಿ 3.58 ಕೋಟಿ ಮಹಿಳೆಯರು ಸದುಪಯೋಗಪಡಿಸಿಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 4,36,510 ಜನರು ಫಲಾನುಭವಿಯಾಗಿದ್ದಾರೆ. ಈ ಯೋಜನೆಗೆ ರಾಜ್ಯ ಸರ್ಕಾರ 137 ಕೋಟಿ ರೂ ವೆಚ್ಚ ಭರಿಸಿದೆ. ಗೃಹಲಕ್ಷ್ಮೀ ಯೋಜನೆಯಡಿ ತಲಾ 2000 ರೂ ಗಳಂತೆ 4.35.820 ಮಹಿಳೆಯರಿಗೆ ನೀಡಿ 89.17 ಕೋಟಿ ರೂ ವೆಚ್ಚವನ್ನು ಭರಿಸಿದೆ ಎಂದು ವಿವರಿಸಿದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ 4.64 ಲಕ್ಷ ಕುಟುಂಬಗಳು ಫಲಾನುಭವಿಗಳಾಗಿದ್ದಾರೆ. ಅದರಂತೆ ಯೋಜನೆಗೆ 76 ಸಾವಿರ ಕೋಟಿ ರೂಗಳನ್ನು ಸರ್ಕಾರ ಪಾವತಿಸಿದೆ. ಇನ್ನು ಜಿಲ್ಲೆಯಲ್ಲಿ 2600 ಯುವಕರು ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗಿದ್ದು, ಪದವೀಧರರಿಗೆ 3 ಸಾವಿರ ರೂ ಹಾಗೂ ಡಿಪ್ಲೊಮೋ ಮುಗಿಸಿದವರಿಗೆ ನಿರುದ್ಯೋಗ ಭತ್ಯೆಯಾಗಿ ಗರಿಷ್ಠ 2 ವರ್ಷದವರೆಗೆ 1,500 ರೂಗಳನ್ನು ಯೋಜನೆ ಅಡಿಯಲ್ಲಿ ನೀಡಲಾಗುವುದು. ಇದಲ್ಲದೆ ವೃದ್ದಾಪ್ಯ, ವಿಧವಾ ವೇತನ ಹಾಗೂ ಇನ್ನಿತರ ಸೌಲಭ್ಯವನ್ನು ನೀಡಲಾಗುತ್ತಿದೆ. ಮುಂದಿನ 2 ಅಥವಾ 3 ವರ್ಷದೊಳಗೆ ಜಿಲ್ಲೆಯ ಎಲ್ಲ ರಸ್ತೆಗಳನ್ನು ಆಧುನೀಕರಣಗೊಳಿಸಲಾಗುವುದು. ಇನ್ನು ಮುಂದೆ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯಲಿದೆ ಎಂದು ಭರವಸೆ ನೀಡಿದ ಅವರು, ಜನಸಾಮಾನ್ಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆದ್ದರಿಂದ ಆ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಸರ್ಕಾರದಿಂದ ಬೆಳೆ ಪರಿಹಾರವಾಗಿ ಪ್ರತಿ ಹೆಕ್ಟೇರ್‌ಗೆ 2 ಸಾವಿರ ರೂನಂತೆ ಒಟ್ಟು 50 ಲಕ್ಷ ಹೆಕ್ಟೇರಿಗೆ ನೇರವಾಗಿ ಫಲಾನುಭವಿಯ ಖಾತೆಗೆ ಹಣ ತಲುಪಿದೆ. ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಇರುವ ಸಂಬಂಧವನ್ನು 5 ಗ್ಯಾರಂಟಿ ಯೋಜನೆ ಗಟ್ಟಿ ಮಾಡಿದೆ. ಸಾರ್ವಜನಿಕರಿಗಾಗಿ ಪಾರದರ್ಶಕವಾಗಿ 5 ಯೋಜನೆಯನು ಅನುಷ್ಠಾನಗೊಳಿಸಿ ಕಷ್ಟಗಳಿಗೆ ಸ್ಪಂದಿಸಿದೆ ಎಂದು ಹೇಳಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ರಾಜ್ಯಸರ್ಕಾರ ಮೈಷುಗರ್ ಕಾರ್ಖಾನೆಯನ್ನು ಪುನಶ್ಚೇತನ ಮಾಡಿದೆ. ಮುಂದಿನ ದಿನಗಳಲ್ಲಿ ಹೊಸ ಸಕ್ಕರೆ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ರೈತರ ಬದುಕು ಸುಧಾರಿಸಲು ವಿಶ್ವೇಶ್ವರಯ್ಯ ನಾಲೆ ಹಾಗೂ ಅಣೆಕಟ್ಟು ನಾಲೆಗಳನ್ನು ಆಧುನೀಕರಣಗೊಳಿಸಿ ಕಟ್ಟಕಡೆಯ ಭಾಗಕ್ಕೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯಸರ್ಕಾರ ಸದಾ ರೈತರ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತದೆ ಎಂದು ತಿಳಿಸಿದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರಾಜ್ಯಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಸ್ಥಳೀಯವಾಗಿ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದೆ. ಡಿಸಿಸಿ ಬ್ಯಾಂಕ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ 16 ಸಾವಿರ ಕೋಟಿ ರೂ ಸಾಲ ನೀಡಲಾಗಿದೆ. ಇದರ ಬಡ್ಡಿಯನ್ನು ಸರ್ಕಾರ ಭರಿಸುತ್ತಿದೆ. ಪರಿಸರದಲ್ಲಿ ಆಗುತ್ತಿರುವ ವೈಫರೀತ್ಯದಿಂದ ಕೃಷಿ ಪದ್ಧತಿಯಲ್ಲಿ ಹೊಸ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿಯನ್ನು ಇಲಾಖೆಗಳು ನೀಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡ್ಯ ಶಾಸಕ ರವಿಕುಮಾರ್ ಗಣಿಗ, ತಾಲೂಕಿನ ಬಸರಾಳಿನಲ್ಲಿರುವ 100 ಎಕರೆ ಸ್ಥಳದಲ್ಲಿ ಜವಳಿ ಪಾರ್ಕ್ ಹಾಗೂ ಸಾಫ್ಟ್‌ವೇರ್ ಕಂಪನಿಗಳನ್ನು ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಜಿಲ್ಲೆಯ ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ. ಮಂಡ್ಯ ತಾಲೂಕು ಹಾಗೂ ನಗರ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಗೆ ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮನೆ-ಮನೆಗೆ ಕುಡಿಯುವ ನೀರು ಒದಗಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.
ಸಮಾವೇಶದಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಸಿ.ವನಜಾಕ್ಷಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ ಇತರರಿದ್ದರು.