

ಮುಧೋಳ: ಸಹೃದಯದ ಮಹಿಳೆಯರೇ ಸೇರಿ ಕಟ್ಟಿಕೊಂಡ ಸಪ್ತ ಸ್ವರ ಸಂಗೀತ ನೃತ್ಯ ಸಾಂಸ್ಕೃತಿಕ ಸಂಸ್ಥೆಯು ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಜಾನಪದ ಸಾಹಿತ್ಯ, ಕಲೆಯನ್ನು ಪೋಷಣೆ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ರನ್ನ ಸಾಂಸ್ಕೃತಿಕ ಭವನದಲ್ಲಿ ಸಪ್ತ ಸ್ವರ ಸಂಗೀತ ನೃತ್ಯ ಸಾಂಸ್ಕೃತಿಕ ಸಂಸ್ಥೆ ಹಾಗೂ ಧಾರವಾಡದ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೇಂದ್ರೆ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇಂದ್ರೆ ಕಾರ್ಯಕ್ರಮಕ್ಕೆ ಐವತ್ತು ಸಾವಿರ ರೂ. ನೀಡಿದ್ದೇನೆ. ಸಂಸ್ಥೆಗೆ ಉಚಿತವಾಗಿ ಜಾಗ ನೀಡಿ ಅದರ ಸೇವೆ ಎಲ್ಲೆಡೆ ಪಸರಿಸುವ ಕಾರ್ಯಕ್ಕೆ ಅಳಿಲು ಸೇವೆ ಮಾಡುವೆ ಎಂದು ಭರವಸೆ ನೀಡಿದರು.
ಬೇಂದ್ರೆ ಕನ್ನಡದ ಶ್ರೇಷ್ಠ ಕವಿ ದ.ರಾ. ಬೇಂದ್ರೆ ಅವರ ನಾಟಕಗಳಲ್ಲಿ ಜೀವನ ದರ್ಶನ ಅಡಗಿದ್ದು, ಮಾನವೀಯ ಮೌಲ್ಯಗಳ ನೈಜ ಚಿತ್ರಣವಿದೆ ಎಂದರು.
ಬೇಂದ್ರೆ ಅವರು ಸಾಹಿತ್ಯದ ಮಜಲುಗಳಲ್ಲಿ ಕೃಷಿ ಮಾಡಿದ್ದರೂ ಅವರು ಪ್ರಸಿದ್ಧಿಗೆ ಬಂದಿದ್ದು ಕಾವ್ಯಗಳಿಂದ. ಅವರ ಕವಿತೆಗಳಲ್ಲಿನ ಜಾನಪದ ಶೈಲಿ ಅವರನ್ನು ಉತ್ತುಂಗಕ್ಕೆ ಏರಿಸಿತು ಎಂದರು.
ಸಾಹಿತಿ ಡಾ.ಸಂಗಮನಾಥ ಲೋಕಾಪುರ ಮಾತನಾಡಿ, ಬೇಂದ್ರೆ ಭಾವುಕ ಮನಸ್ಸಿನ ಕವಿ. ಮಾನವೀಯ ಮೌಲ್ಯ ಹೊಂದಿದ ಕವಿ. ಸುಮಾರು ಹದಿನಾಲ್ಕು ನಾಟಕ ಬರೆದಿದ್ದು, ಜನರ ಬದುಕನ್ನು ನೈಜವಾಗಿ ಚಿತ್ರಿಸಿದ್ದಾರೆ. ಬೇಂದ್ರೆ ಅವರ ನಾಟಕ ಸಾಹಿತ್ಯವನ್ನು ಹೆಚ್ಚಾಗಿ ಪ್ರಚಾರ ಮಾಡುವ ಅಗತ್ಯ ಇದೆ. ಈ ಕುರಿತು ಬೇಂದ್ರೆ ವೇದಿಕೆ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಡಾ.ಡಿ.ಎಂ. ಹಿರೇಮಠ, ಮಲ್ಲಿಕಾರ್ಜುನ ಸೋಲಗಿ ಕಲಾವಿದರಾದ ಅನಂತ ದೇಶಪಾಂಡೆ, ನಾಗರತ್ನ ಹಡಗಲಿ, ಗಂಗಾಧರ ಗಾಣಿಗೇರ, ಕಲ್ಲಪಣ್ಣ ಸಬರದ, ಡಾ. ಶಿವಾನಂದ ಕುಬಸದ, ಎಂ.ಜಿ.ದಾಸರ, ಪ್ರಕಾಶ ವಸ್ತ್ರದ, ಚಂದ್ರಶೇಖರ ದೇಸಾಯಿ, ಸಂಗಮೇಶ ನೀಲಗುಂದ, ಆನಂದ ಪೂಜಾರಿ, ಪ್ರವೀಣ ಗಂಗಣ್ಣವರ, ಪ್ರಕಾಶ ಬೆಳಗಲಿ, ಶಿಂಗರಡ್ಡಿ, ಎಸ್.ಕೆ. ಸತ್ತಿಗೇರಿ, ಬಸವರಾಜ ಬಳ್ಳಾರಿ ಸದುಗೌಡ ಪಾಟೀಲ, ಮುದಕಣ್ಣ ಅಂಬಿಗೇರ, ಶ್ರವಣ ಸೋಕನದಾಗಿ, ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪಾಟೀಲ ಇದ್ದರು. ಶ್ರೀಶೈಲ ಹುನ್ನೂರ ನಿರೂಪಿಸಿದರು. ಅನಿತಾ ಪಾಟೀಲ ಸ್ವಾಗತಿಸಿ ವಂದಿಸಿದರು.
ಕಿರುತೆರೆ ನಟ ಅನಂರ ದೇಶಪಾಂಡೆ ಬೇಂದ್ರೆಯವರ ದರ್ಶನ ಮಾಡಿಸಿದರೆ, ಕಲಾವಿದರಾದ ನಾಗರಾಜ ಪತ್ತಾರ ಹಾಗೂ ಬಸವರಾಜ ಕಲೆಗಾರ ತಮ್ಮ ಕಲೆಯನ್ನು ಬೇಂದ್ರೆಯವರ ಭಾವಚಿತ್ರದ ರೇಖಾಚಿತ್ರವನ್ನು ಬಿಡಿಸುವುದರ ಮೂಲಕ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು.