

ವಿಜಯವಾಣಿ ಸುದ್ದಿಜಾಲ ಧಾರವಾಡ
ದ.ರಾ. ಬೇಂದ್ರೆ ಧಾರವಾಡದವರು ಎಂದು ಹೇಳುವುದಕ್ಕೆ ಸೀಮಿತವಾಗದೆ, ಅವರ ಕತಿಗಳನ್ನು ಆಳವಾಗಿ ಓದಬೇಕು. ಅವರ ಸಾಹಿತ್ಯವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಬೇಂದ್ರೆ ಬಹುಮುಖ ಪ್ರತಿಭೆಯಾದ್ದರಿಂದ ಅವರ ಕಾವ್ಯ ಏನನ್ನು ಧ್ವನಿಸುತ್ತದೆ ಎಂದು ಅರಿಯಬೇಕು ಎಂದು ಹಿರಿಯ ಚಿಂತಕ ಸುರೇಶ ಕುಲಕರ್ಣಿ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಧಾರವಾಡ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ "ಕನ್ನಡಕ್ಕೆ ದ.ರಾ. ಬೇಂದ್ರೆ ಅವರ ಕೊಡುಗೆ' ಕುರಿತು ಉಪನ್ಯಾಸ ನೀಡಿದರು.
ದ.ರಾ. ಬೇಂದ್ರೆ ಬಗ್ಗೆ ಹೆಮ್ಮೆ ಪಡುವುದರ ಜತೆಗೆ ಅವರ ಎಲ್ಲ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡುವುದು ಅಗತ್ಯ. ಬೇಂದ್ರೆ ಅಸಾಧಾರಣ ವ್ಯಕ್ತಿ. ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಸಿರಿವಂತಗೊಳಿಸಿದ ಬೇಂದ್ರೆ ಅವರ ಬಗ್ಗೆ ಈಗಲೂ ಕೆಲವರು ಅವಹೇಳನಕಾರಿಯಾಗಿ ಮಾತನಾಡುವುದು ನೋವಿನ ಸಂಗತಿ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ರಾಜನ್ ದೇಶಪಾಂಡೆ, ಡಾ. ರಮಾಕಾಂತ ಜೋಶಿ, ಅರವಿಂದ ಕುಲಕರ್ಣಿ, ವಿನಾಯಕ ಜೋಶಿ, ವಿನಾಯಕ ದೇಶಪಾಂಡೆ, ಡಾ. ಸಂಧ್ಯಾ ಕುಲಕರ್ಣಿ, ನರಸಿಂಹ ಪ್ಯಾಟಿ, ಪ್ರಸನ್ನ ಕರ್ಪೂರ, ನಟರಾಜ ಉಪಾಧ್ಯಾಯ, ಅನುರಾಧಾ ಕುಲಕರ್ಣಿ, ರೋಹಿಣಿ ಇನಾಮತಿ ಅವರನ್ನು ಸನ್ಮಾನಿಸಲಾಯಿತು.
ಆರ್.ಡಿ. ಕುಲಕರ್ಣಿ, ರಮೇಶ ಭಟ್, ಇತರರು ಇದ್ದರು.