ಬೇಂದ್ರೆ ಪ್ರತಿ ಕವನದಲ್ಲೂ ಸಂದೇಶವಿದೆ, ಡಾ. ಕೆ.ಎಸ್. ಶರ್ಮಾ ಅಭಿಪ್ರಾಯ

IMG_20230927_205940_176.jpg
Published on

ಹುಬ್ಬಳ್ಳಿ: ವರಕವಿ ಡಾ. ದ.ರಾ. ಬೇಂದ್ರೆ ಅವರ ಪ್ರತಿ ಸಾಹಿತ್ಯ, ಕವನದಲ್ಲಿಯೂ ಒಂದೊಂದು ಸಂದೇಶವಿದೆ, ವಿಶ್ವವನ್ನೇ ಪರಿವರ್ತನೆ ಮಾಡುವಂತಹ ಸಂದೇಶ ಅವರದಾಗಿತ್ತು ಎಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಬಸವೇಶ್ವರನಗರದ ವಿಶ್ವಶ್ರಮ ಚೇತನದಲ್ಲಿ ಸಂಜೀವಿನಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯದ ಆಶ್ರಯದಲ್ಲಿ ಡಾ. ಕೆ.ಎಸ್. ಶರ್ಮಾ ಇವರ 90ನೇ ಜನ್ಮದಿನೋತ್ಸವ ಅಂಗವಾಗಿ ಡಾ. ದ.ರಾ. ಬೇಂದ್ರೆ ಸಾಹಿತ್ಯ ಸಪ್ತಾಹದ ಐದನೇ ದಿನ ಬುಧವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ದ ಸಂದರ್ಭದಲ್ಲಿ ಅವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧವಾಗಿ ನರಬಲಿ ಕವನ ಬರೆದಿದ್ದಕ್ಕೆ ಜೈಲುವಾಸ ಅನುಭವಿಸಿದ್ದರು. ಆದರೆ, ಅವರು ಬರೆದ ಕವನವು ಬ್ರಿಟಿಷರಿಗೆ ಅರ್ಥವಾಗಿತ್ತು, ಭಾರತೀಯರಿಗೆ ಅರ್ಥವಾಗಿರಲಿಲ್ಲ ಎಂಬುದೇ ವಿಪರ್ಯಾಸ ಎಂದರು.

ಬೇಂದ್ರೆ ಅವರ ಕಾವ್ಯಗಳನ್ನು ಇಂದಿನ ಪೀಳಿಗೆ ಓದಬೇಕೆಂಬ ನಿಟ್ಟಿನಲ್ಲಿ ಸಾಹಿತ್ಯ ಸಪ್ತಾಹ ಆಯೋಜನೆ ಮಾಡಲಾಗಿದ್ದು, ಅವರ ಸಂದೇಶ, ಗದ್ಯ, ನಾಟಕ ಹಾಗೂ ವಿಮರ್ಶೆಗಳು ಎಂದೆಂದಿಗೂ ಜೀವಂತ. ಹೀಗಾಗಿ ಅವರು ಎಂದಿಗೂ ನಮ್ಮೊಂದಿಗೆ ಜೀವಂತ ಎಂದು ಡಾ. ಶರ್ಮಾ ಸ್ಮರಿಸಿದರು.

ಡಾ. ದ.ರಾ. ಬೇಂದ್ರೆ ಅವರ ಸಂರ್ಪೂಣ ಬದುಕು, ಬರಹ, ರೇಖಾ ಚಿತ್ರಣ ಕುರಿತು ಖ್ಯಾತ ಶಿಕ್ಷಣ
ತಜ್ಞ ಹಾಗೂ ಸಾಹಿತಿ ಸುರೇಶ ಕುಲಕಣಿರ್, ರೇಖಾ ಚಿತ್ರದ ಮೂಲಕ ಉಪನ್ಯಾಸ ನೀಡಿದರು.
ಬೇಂದ್ರೆ ಎಂದರೆ ಬೆಂದರೇ ಎಂಬ ಅರ್ಥ. ಈ ನಿಟ್ಟಿನಲ್ಲಿ ಒಬ್ಬರಿಗೊಬ್ಬರು ತಿಳಿದು ಬದುಕಬೇಕು. ತಿಂದು ಬದುಕಬಾರದು ಎಂದರು.

ಆಯುರ್ವೇದ ಕಾಲೇಜಿನ ಚೇರ್ಮನ್ ಮೋಹನ ಲಿಂಬಿಕಾಯಿ, ಗಾಯಕರಾದ ಪಂ. ಬಾಲಚಂದ್ರ ನಾಕೋಡ, ಡಾ. ಅಶೋಕ ಬಿಂಗಿ, ಡಾ. ಶಶಿಕಾಂತ ಹಿರೇಮಠ, ಆಡಳಿತ ಅಧಿಕಾರಿ ಶ್ರೀನಿವಾಸ್ ಬನ್ನಿಗೋಳ, ಪ್ರಾಂಶುಪಾಲ ಡಾ. ಚರಂತಯ್ಯ ಹಿರೇಮಠ, ಪ್ರೊ. ರವೀಂದ್ರ ಶಿರೋಳ್ಕರ, ಡಾ. ಸೋಮಶೇಖರ ಹುದ್ದಾರ, ಡಾ. ಮಹೇಶ ದೇಸಾಯಿ ಉಪಸ್ಥಿತರಿದ್ದರು.

ಸೆ. 28ರಂದು ಸಂಜೆ 5ಕ್ಕೆ ಡಾ. ದ.ರಾ. ಬೇಂದ್ರೆಯವರ ನಾಟಕಗಳ ವಿಮರ್ಶೆ ಕುರಿತು ನಾಟಕ ನಿರ್ದೇಶಕ ಡಾ. ಶಶಿಧರ ನರೇಂದ್ರ ಉಪನ್ಯಾಸ ನೀಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net