

ಹುಬ್ಬಳ್ಳಿ: ಇಲ್ಲಿಯ ಸಂಜೀವಿನಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಡಾ. ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಡಾ. ಕೆ.ಎಸ್. ಶರ್ಮಾ ಇವರ 90ನೇ ಜನ್ಮದಿನೋತ್ಸವ ಅಂಗವಾಗಿ ವರಕವಿ ಡಾ. ದ.ರಾ. ಬೇಂದ್ರೆ ಸಾಹಿತ್ಯ ಸಪ್ತಾಹವನ್ನು ನಗರದ ಗೋಕುಲ ರಸ್ತೆ ವಿಶ್ವಶ್ರಮ ಚೇತನದಲ್ಲಿ ಸೆ. 23ರಿಂದ ಆಯೋಜಿಸಲಾಗಿದೆ.
ಸಪ್ತಾಹದಲ್ಲಿ ಬೇಂದ್ರೆ ಅವರ ಸಮಗ್ರ ಸಾಹಿತ್ಯ ಹಾಗೂ ಬಹುಮುಖ ವ್ಯಕ್ತಿತ್ವದ ಅನಾವರಣ ಮಾಡಲಾಗುವುದು ಎಂದು ಸಮಾರಂಭದ ಸಂಚಾಲಕ ಮೋಹನ ಲಿಂಬಿಕಾಯಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೆ. 23ರಂದು ಸಂಜೆ 4.30ಕ್ಕೆ ಸಪ್ತಾಹದ ಉದ್ಘಾಟನೆಯನ್ನು ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವಿಶ್ರಾಂತ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ನೆರವೇರಿಸುವರು. ಡಾ. ಕೆ.ಎಸ್. ಶರ್ಮಾ ಅಧ್ಯಕ್ಷತೆ ವಹಿಸುವರು.
ಸೆ. 24ರಂದು ಸಂಜೆ 4.30ಕ್ಕೆ ಡಾ. ದ.ರಾ. ಬೇಂದ್ರೆ ಅವರ ಕವನಗಳ ಸಂಗೀತ ಸಂಜೆಯಲ್ಲಿ ಸಂಗೀತಾ ಕಟ್ಟಿ ಮತ್ತು ಸಂಗಡಿಗರು ಕಾರ್ಯಕ್ರಮ ನಡೆಸಿಕೊಡುವರು.
25ರಂದು ಸಂಜೆ 4.30ಕ್ಕೆ ಡಾ. ದ.ರಾ. ಬೇಂದ್ರೆ ಅವರ ಸಮಗ್ರ ಗದ್ಯ ವಿಮರ್ಶೆ ಕುರಿತು ಪ್ರೊ. ಎಂ.ಜಿ. ಹೆಗಡೆ ಉಪನ್ಯಾಸ ನೀಡುವರು. ವಿಜ್ಞಾನ ಮತ್ತು ಸಂಖ್ಯಾಶಾಸ್ತ್ರ ಕುರಿತು ಪ್ರಭಾಕರ ಬೇಂದ್ರೆ ಮಾತನಾಡುವರು.
ಬೇಂದ್ರೆಯವರ ಬರಹಗಳಲ್ಲಿ ತತ್ವಜ್ಞಾನ, ನಾಟಕಗಳ ವಿಮರ್ಶೆ ಹೀಗೆ 7 ದಿನಗಳ ವರೆಗೆ ನಡೆಯುವ ವಿವಿಧ ಕಾರ್ಯಕ್ರಮಗಳು ಸಾಹಿತ್ಯ, ಕಲೆ, ಸಂಸತಿಯ ಆರಾಧಕರನ್ನು ಕೈಬೀಸಿ ಕರೆಯಲಿವೆ ಎಂದರು.
ದಿನಗೂಲಿ ನೌಕರರ ವಿಮೋಚನಾ ಶಿಲ್ಪಿ ಎಂದೇ ಖ್ಯಾತರಾದ ಡಾ. ಕೆ.ಎಸ್. ಶರ್ಮಾ ಅವರ 90ನೇ ಜನ್ಮದಿನವನ್ನು ಸೆ. 30ರಂದು ಆಯೋಜಿಸಲಾಗಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂತಿರ್ ವಿ. ಗೋಪಾಲಗೌಡ, ಕಾನೂನು ಸಚಿವ ಎಚ್.ಕೆ. ಪಾಟೀಲ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಹಿರಿಯ ವಕೀಲ ಮೋಹನ ಕಾತರಕಿ ಅತಿಥಿಗಳಾಗಿ ಪಾಲ್ಗೊಳ್ಳುವರು.
2014ರಿಂದ 2022ರ ವರೆಗೆ ಡಾ. ಶರ್ಮಾ ಅವರು ಬರೆದ ಅಂಕಣ ಲೇಖನಗಳ ವಾಷಿರ್ಕ ಸಂಗ್ರಹದ 9 ಸಂಪುಟಗಳು ಏಕಕಾಲಕ್ಕೆ ಲೋಕಾರ್ಪಣೆಗೊಳ್ಳಲಿವೆ ಎಂದರು.
ಡಾ. ಶ್ರೀನಿವಾಸ ಬನ್ನಿಗೋಳ, ಡಾ. ಸೋಮಶೇಖರ ಹುದ್ದಾರ, ಡಾ. ಸಿ.ಸಿ. ಹಿರೇಮಠ, ರವೀಂದ್ರ ಶಿರೋಳ್ಕರ್, ಬಸವರಾಜ ಸರವಗೋಳ ಗೋಷ್ಠಿಯಲ್ಲಿದ್ದರು.