

ಬೇಲೂರು : ನವೋದಯ ಕಾವ್ಯ ಕಾಲಘಟ್ಟದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಪರಿಪೂರ್ಣತೆ ನೀಡಿದ ಹೆಗ್ಗಳಿಕೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ವರ ಕವಿ ದರಾ ಬೇಂದ್ರೆಯವರಿಗೆ ಸಲ್ಲುತ್ತದೆ ಎಂದು ಅಂಗವಿಕಲರ ಸಂಘದ ತಾಲೂಕು ಅಧ್ಯಕ್ಷ ಪುರುಷೋತ್ತಮ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ ಹಾಗೂ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ‘ವರಕವಿ ದ.ರಾ. ಬೇಂದ್ರೆ ಒಂದು ನೆನಪು’ ಅಂಗವಾಗಿ ಸೋಮವಾರ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕವಿ ಬೇಂದ್ರೆಯವರು ತಾವು ಕಣ್ಣಾರೆ ಕಂಡದ್ದನ್ನು ತಮ್ಮ ಕವಿತೆಗಳಲ್ಲಿ ಬರೆದು ಎಚ್ಚರಿಸುತ್ತಿದ್ದರು. ಇಂತಹ ಮಹಾನ್ ಕವಿಗಳ ಸಂದೇಶಗಳನ್ನು ಯುವ ಸಮುದಾಯಕ್ಕೆ ತಿಳಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ ಎಂದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಮಾತನಾಡಿ, ಸಂಸ್ಥೆ ಕಳೆದ ಐದಾರು ವರ್ಷದಿಂದ ತಾಲೂಕಿನಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯವನ್ನು ಪ್ರೋತ್ಸಾಹಿಸುವುದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿಶೇಷವಾಗಿ ಕವಿ ಬೇಂದ್ರೆಯವರ ಬದುಕು ಮತ್ತು ಗೀತೆಯ ಭಾವಾರ್ಥಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಚಟುವಟಿಕೆ ಮಾಡುತ್ತಿದೆ ಎಂದರು.ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಚ್.ಎಂ.ಮಹೇಶ್, ಸಾಹಿತಿ ಇಂದ್ರಮ್ಮ, ಆಶಾಕಿರಣ್, ಉಪನ್ಯಾಸಕರಾದ ಮೋಹನ್ ಕುಮಾರ್, ವೀರಭದ್ರಪ್ಪ ಇತರರಿದ್ದರು.