

ವಿಜಯವಾಣಿ ಸುದ್ದಿಜಾಲ ಧಾರವಾಡ
ವ್ಯಕ್ತಿಯ ಬದುಕು, ಸಂಸಾರ, ನಿಸರ್ಗ ಹಾಗೂ ಎಲ್ಲ ಆಯಾಮಗಳಲ್ಲಿ ದೊರೆಯಬಹುದಾದ ಭಾವಸಂಕಿರಣಗಳನ್ನು ಅನನ್ಯ ರೀತಿಯಲ್ಲಿ ಬರಹಗಳಿಂದ ಬೇಂದ್ರೆಯವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಡಾ. ಗುರುದೇವಿ ಹುಲೆಪ್ಪನವರಮಠ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಎಜುಕೇಶನ್ ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಾಲೇಜು ವತಿಯಿಂದ ಮಾಳಮಡ್ಡಿಯ ಕೆ.ಇ.ಬೋರ್ಡ ಸಭಾಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಣದಲ್ಲಿ ಅವರು ಮಾತನಾಡಿದರು.
ಬೇಂದ್ರೆಯವರ ಕಾವ್ಯ, ನಾಟಕ ಹಾಗೂ ಸಾಹಿತ್ಯ ಅಧ್ಯಯನ ಮಾಡುವುದರಿಂದ ಆತ್ಮ ಸಂತೋಷ, ಜ್ಞಾನ, ನಮ್ಮ ಜೀವನದ ನೋವು ಮರೆಯಲು ಸಾಧ್ಯ. ಸಜ್ಜನರ ಸಹವಾಸದಿಂದ ಒಳ್ಳೆ ಚಿಂತನೆ, ಕಾರ್ಯ ಮಾಡಬೇಕು. ಬೇಂದ್ರೆ ಸಾಹಿತ್ಯ ಇಂದಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಸಾಹಿತ್ಯವಾಗಿದೆ ಎಂದರು.
ಕೆ.ಇ. ಬೋರ್ಡ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಸಮೂಹದಲ್ಲಿ ಕನ್ನಡ ಸಾಹಿತ್ಯದ ಆಸಕ್ತಿ ಮತ್ತು ಅಭಿರುಚಿ ಹೆಚ್ಚಿಸುವ, ಜೀವನ ಮೌಲ್ಯ ಬೆಳೆಸುವ ಉದ್ದೇಶದಿಂದ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಸಂಸ್ಥೆ ಅಧ್ಯಕ್ಷ ಡಾ. ಎಂ.ಎನ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್. ಕುಲಕರ್ಣಿ, ಡಾ.ಎಸ್.ಎಸ್. ಹನಮಂತಗಡ, ಸುರೇಶ ಕುಲಕರ್ಣಿ, ಹರ್ಷ ಡಂಬಳ, ಮಲ್ಲಿಕಾರ್ಜುನ ಚಿಕ್ಕಮಠ, ಕೆ.ಎನ್. ಕಟ್ಟಿ, ಎನ್.ಎಸ್. ಗೋವಿಂದರಡ್ಡಿ, ಎನ್.ಎಂ. ಸವಣೂರ, ಉಪನ್ಯಾಸಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುನಿತಾ ಕಡಪಟ್ಟಿ ಸ್ವಾಗತಿಸಿದರು. ಡಿ.ಎಸ್. ರಾಜಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಲ್. ಶೇಖರಗೋಳ ನಿರೂಪಿಸಿದರು. ಜಿ.ಸಿ ಕುಲಕರ್ಣಿ ವಂದಿಸಿದರು.
ನಂತರ ಏರ್ಪಡಿಸಿದ್ದ ವಿವಿಧ ಗೋಷ್ಠಿಯಲ್ಲಿ ಡಾ. ಕೃಷ್ಣಾ ಕಟ್ಟಿ ದ.ರಾ.ಬೇಂದ್ರೆ ಜೀವನ ಕಾವ್ಯ ಕುರಿತು, ದ.ರಾ. ಬೇಂದ್ರೆ ಸಾಹಿತ್ಯದಲ್ಲಿ ಜಾನಪದ ಸೂಗಡು ಕುರಿತು ಡಾ. ಬಸವರಾಜ ಹೊಂಗಲ, ದ.ರಾ. ಬೇಂದ್ರೆ ನಾಟಕದಲ್ಲಿ ವಸ್ತು ವಿಷಯ ಕುರಿತು ಸಾಹಿತಿ ಮಾರ್ತಾಂಡಪ್ಪ ಕತ್ತಿ ಹಾಗೂ ಬಳಕೆಯ ಕನ್ನಡದಲ್ಲಿ ವ್ಯಾಕರಣದ ಅವಶ್ಯಕತೆ ಕುರಿತು ಡಾ. ಎಸ್.ಬಿ. ಕಲ್ಲೂರ ಮಾತನಾಡಿದರು.