ಬೇಂದ್ರೆ ಶಾಂತರಸದ ಕವಿ : ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್

bendre jayanhti
Published on

ಮೈಸೂರು: ಕನ್ನಡ ಕಾವ್ಯ ಪರಂಪರೆಯಲ್ಲಿ ಕುವೆಂಪು, ದ.ರಾ.ಬೇಂದ್ರೆ ಹಾಗೂ ಪು.ತಿ.ನ. ಅವರುಗಳು ರತ್ನತ್ರಯರೆಂದು ಹೆಸರುವಾಸಿಯಾಗಿದ್ದು, ಕುವೆಂಪು ಭಾವಾವೇಶದ ಕವಿಯಾದರೆ, ಪು.ತಿ.ನ. ಹಾಗೂ ಬೇಂದ್ರೆ ಶಾಂತರಸದ ಕವಿಗಳೆಂದು ಹಿರಿಯ ವಿದ್ವಾಂಸ ಡಾ. ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ಶಾರದಾದೇವಿ ನಗರದ ಕೃಷ್ಣಮೂರ್ತಿ ಬಡಾವಣೆಯ ಕೃಷ್ಣಮೂರ್ತಿ ಸಭಾಂಗಣದಲ್ಲಿ ಡಾ.ಕೆ. ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ ಹಾಗೂ ವಾಸುದೇವ ಮಹಾರಾಜ ಫೌಂಡೇಷನ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವರಕವಿ ಡಾ. ದ.ರಾ.ಬೇಂದ್ರೆ ಅವರ 128ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನದಲ್ಲಿ ನೊಂದು ಬೆಂದು ಅದನ್ನೇ ತನ್ನ ಕಾವ್ಯದ ವಸ್ತುವನ್ನಾಗಿ ಸಮಾಜಕ್ಕೆ ನೀಡಿದ ಬೇಂದ್ರೆ ಅವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಸಾಧ್ಯ ಎಂದ ಅವರು ಬೆಂದರೆ ಮಾತ್ರ ಬೇಂದ್ರೆಯವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದರು.

ಹಿರಿಯ ಸಂಸ್ಕೃತ ವಿದುಷಿ ಡಾ.ಕೆ. ಲೀಲಾ ಪ್ರಕಾಶ್, ದ.ರಾ.ಬೇಂದ್ರೆ ಅವರ ಹಲವಾರು ಕವನಗಳು ಸಿನಿಮಾ ಗೀತೆಗಳಾಗಿ ಅತ್ಯಂತ ಜನಪ್ರಿಯಗೊಂಡು ಜನಮನದಲ್ಲಿ ಹಾಸು ಹೊಕ್ಕಾಗಿದೆ ಎಂದು ಹೇಳಿದರು.

ಹಿರಿಯ ಸಂಸ್ಕೃತ ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿ, ಇಂದಿನ ಇಂದಿನ ಕಾವ್ಯ ಜಗತ್ತು ಗೊತ್ತು ಗುರಿಯಿಲ್ಲದ ಮಾರ್ಗದೆಡೆಗೆ ಸಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಇದಕ್ಕೆಲ್ಲ ಕುವೆಂಪು, ಬೇಂದ್ರೆ ಅವರಂತಹ ಕಾವ್ಯಗಳ ಅಧ್ಯಯನ ಶೀಲತೆಯೇ ಪರಿಹಾರ ಎಂದು ತಿಳಿಸಿದರು.

ಸಾಹಿತಿ ಕುಲಕರ್ಣಿ, ಸಮಾಜಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಪ್ರಕಾಶಕ ಕೇಶವ ಪ್ರಕಾಶ್, ನಿವೃತ್ತ ಅಧ್ಯಾಪಕಿ ಕೆ.ಆರ್.ಪ್ರೇಮಲೀಲಾ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ನೀ, ಗಿರಿಗೌಡ, ಬ್ರಹ್ಮಿಭೂತ ವಾಸುದೇವ್ ಮಹಾರಾಜ್‌ಪ್ರತಿಷ್ಠಾನದ ಅಧ್ಯಕ್ಷ ಎಂ.ವಿ. ನಾಗೇಂದ್ರ ಬಾಬು, ಸಂಚಾಲಕ ಅನಂತ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net