

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾವ್ಯ ಸತ್ಯಕ್ಕಿಂತ ನಿತ್ಯಸತ್ಯವನ್ನು ಮುಟ್ಟುವಂತಹ ಮೇರು ಮಟ್ಟದ ಪ್ರತಿಭಾಶಾಲಿಯಲ್ಲಿ ಬೇಂದ್ರೆ ಅವರನ್ನು ಮೀರಿಸಲಿಕ್ಕೆ ಸಾಧ್ಯವಿಲ್ಲ ಎಂದು ಲೇಖಕಿ ಡಾ.ಸಂಧ್ಯಾ ಹೆಗಡೆ ದೊಡ್ಡಹೊಂಡ ಅಭಿಪ್ರಾಯಪಟ್ಟರು.
ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನಗರದ ಸಾಧನಕೇರಿ ಬೇಂದ್ರೆ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವರಕವಿ ಡಾ.ದ.ರಾ.ಬೇಂದ್ರೆ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬೇಂದ್ರೆ ಮತ್ತು ಸೃಷ್ಟಾೃತ್ಮಕತೆ ಕುರಿತು ಅವರು ಮಾತನಾಡಿದರು.
ಇಡೀ ಕನ್ನಡ ಸಾಹಿತ್ಯ ಪ್ರಪಂಚ ಅವಲೋಕಿಸಿದಾಗ ಬೇಂದ್ರೆ ಅವರಂತಹ ಸೃಸ್ಟಾೃತ್ಮಕ ಕವಿಗಳು ಕೆಲವರು ಸಿಗುತ್ತಾರೆ. ಅದರಲ್ಲೂ ಹೊಸಗನ್ನಡ ಸಾಹಿತ್ಯ ಗಮನಿಸಿದಾಗ ಅವರ ಭಾಷೆ, ತಾಂತ್ರಿಕ ವಿನ್ಯಾಸ, ಆಯ್ದುಕೊಳ್ಳುವ ವಸ್ತು, ಒಬ್ಬ ಕವಿ ತನ್ನ ಓದುಗನಿಗೆ ಕಾವ್ಯ ಪ್ರವೇಶ ಕಲ್ಪಿಸುವ ಕಾವ್ಯ ಸತ್ಯವು ಬಹುದೊಡ್ಡ ಕಾಣಿಕೆ. ಬೇಂದ್ರೆ ಸೃಷ್ಟಾೃತ್ಮಕತೆ ಬೇರು ಹುಡುಕಬೇಕಾದರೆ ವೇದ, ಉಪನಿಷತ್, ವಿಜ್ಞಾನ, ತತ್ವಶಾಸ್ತ್ರ, ಸಂಖ್ಯಾಶಾಸ್ತ್ರ, ನಕ್ಷತ್ರವಿಜ್ಞಾನ, ಮಾನವಶಾಸ್ತ್ರ, ಕನ್ನಡ ಪರಂಪರೆ, ಸಂಸ್ಕೃತದ ಸಾಹಿತ್ಯಾಭ್ಯಾಸ ಇವೆಲ್ಲವನ್ನು ಗಮನಿಸಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಮಾತನಾಡಿ, ಬೇಂದ್ರೆ ಆಧುನಿಕ ಕನ್ನಡ ಸಾಹಿತ್ಯದ ಅಗ್ರಕವಿ. ಅವಧೂತ ಪ್ರಜ್ಞೆ ಮತ್ತು ದೇಶಿ ಅಭಿವ್ಯಕ್ತಿಗಳ ಅಪೂರ್ವ ಸಂಗಮವೆನಿಸಿದ ಇವರ ಕಾವ್ಯ ಕನ್ನಡದ ಒಂದು ಅತ್ಯಪೂರ್ವ ಪ್ರಯೋಗ. ಈ ಕಾವ್ಯ ಪದ್ಧತಿಗೆ ಇವರೇ ಆದಿ. ಅಷ್ಟೇ ಅಲ್ಲದೆ ನಾಟಕ, ವಿಮರ್ಶೆ, ಕಾವ್ಯ ಮೀಮಾಂಸೆ, ವಿಚಾರ ಸಾಹಿತ್ಯ ಇವರ ಸಾಹಿತ್ಯ ಪ್ರಕಾರಗಳಾಗಿವೆ. ಇದಕ್ಕೆ ಪೂರಕ ಎಂಬಂತೆ ಮರಾಠಿ, ಬಂಗಾಲಿ, ಸಂಸ್ಕೃತ, ಇಂಗ್ಲಿಷ್, ಕನ್ನಡ ಹೀಗೆ ಪಂಚ ಭಾಷಾ ಪ್ರವೀಣರಾಗಿದ್ದರು ಎಂದರು.
ಪಂ.ಶ್ರೀಪಾದ ಹೆಗಡೆ ಬೇಂದ್ರೆ ಭಾವಗೀತ ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಶ್ರೀಧರ ಮಾಂಡ್ರೆ ಹಾಗೂ ಹಾರ್ಮೋನಿಯಂನಲ್ಲಿ ಗುರುಪ್ರಸಾದ ಹೆಗಡೆ ಸಾಥ್ ನೀಡಿದರು.
ಮಲ್ಲಿಕಾರ್ಜುನ ಚಿಕ್ಕಮಠ, ಡಾ. ಚಿದಾನಂದ ಮಾಸನಕಟ್ಟೆ, ಡಾ.ದೀಪಕ ಆಲೂರು, ವೆಂಕಟೇಶ ದೇಸಾಯಿ, ಅನಂತ ದೇಶಪಾಂಡೆ, ಡಾ.ಜಿ.ಕೆ. ಹಿರೇಮಠ, ಪ್ರೊ. ಸುರೇಶ ಗುದಗನವರ, ಸುರೇಶ ಗೋವಿಂದರೆಡ್ಡಿ, ಡಾ. ಶಕ್ತಿ ಪಾಟೀಲ, ಡಾ. ಶ್ರೀಧರ ಕುಲಕರ್ಣಿ, ಆರತಿ ಪಾಟೀಲ, ಬಿ.ಐ.ಈಳಗೇರ ಡಾ. ಬಸವರಾಜ ಕಲೆಗಾರ, ಇತರರು ಇದ್ದರು.
ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಪ್ರೊ. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.