ಬೇಂದ್ರೆ ಪ್ರತಿಷ್ಠಾನದಿಂದ ಕೃತಿ ಬಿಡುಗಡೆ

IMG_20250213_212305_386-1.jpg
Published on

ಹುಬ್ಬಳ್ಳಿ: ವರಕವಿ ಡಾ. ದ.ರಾ. ಬೇಂದ್ರೆ ಅವರ 129ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಬೇಂದ್ರೆ ಪ್ರತಿಷ್ಠಾನದ ವತಿಯಿಂದ ಇಲ್ಲಿಯ ಗೋಕುಲ ರಸ್ತೆ ವಿಶ್ವಶ್ರಮ ಚೇತನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ಕೃತಿ ಬಿಡುಗಡೆ ಮಾಡಲಾಯಿತು.

ಬೇಂದ್ರೆ ಕಂಡ ಕನಕದಾಸರ ಅಮರ ಬೆಳಗು ಕೃತಿಯನ್ನು ಆಕಾಶವಾಣಿ ನಿರ್ದೇಶಕ ಡಾ. ಶರಣಬಸವ ಚೋಳಿನ್ ಲೋಕಾರ್ಪಣೆ ಮಾಡಿ ಮಾತನಾಡಿದರು.

ಮರುಮುದ್ರಿತವಾದ 5 ಕವನ ಸಂಕಲನಗಳಾದ ನಾಕುತಂತಿ, ಬೇಂದ್ರೆ ಜೀವನ ಪರಿಚಯ, ನಾದಲೀಲೆ, ಹಾಡು ಪಾಡು ಹಾಗೂ ವರಕವಿ ಡಾ. ದ.ರಾ. ಬೇಂದ್ರೆ ಇವರ ಮೂರು ಸಂದರ್ಶನಗಳು ಕೃತಿಗಳನ್ನು ಬಸವ ಶಾಂತಿ ಮಿಷನ್ ಅಧ್ಯಕ್ಷ ಮಹದೇವ ಹೊರಟ್ಟಿ ಬಿಡುಗಡೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಬೇಂದ್ರೆ ಪ್ರತಿಷ್ಠಾನದ ಸಂಚಾಲಕ ಡಾ. ಕೆ.ಎಸ್. ಶರ್ಮಾ ಮಾತನಾಡಿ, ಬೇಂದ್ರೆಯವರು ಕನಕದಾಸರನ್ನು ಕಂಡ ದೃಷ್ಟಿಯು ಸಹ ಜಾತಿ ಮತ, ಕುಲಗಳ ಭೇದಭಾವವಿಲ್ಲದ ಸಮ ಸಮಾಜದ, ಮಾನವತಾವಾದದ ಆಶಯವಾಗಿತ್ತು. ಅವರ ಹಾಡುಗಳನ್ನು ಭಜನೆ ಮಾಡುವುದಕ್ಕಿಂತ ಅವುಗಳ ಆಶಯವನ್ನು ಆಚರಣೆಗೆ ತಂದು ಹೊಸ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಎನ್.ಬಿ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಕೆ.ಎಸ್. ಕೌಜಲಗಿ, ಬೇಂದ್ರೆ ಪ್ರತಿಷ್ಠಾನದ ಮೂಲಕ ವಿಶ್ವಶ್ರಮ ಚೇತನದ ಕೊಡುಗೆ ಕುರಿತು ಮಾತನಾಡಿದರು.

ಸಂಗೀತ ವಿದುಷಿ ಸುಜಾತಾ ಗುರವ ಹಾಗೂ ಸಂಗಡಿಗರು ಬೇಂದ್ರೆಯವರ ಕವನಗಳಿಗೆ ಸಂಗೀತ ಸಂಯೋಜನೆ ಮಾಡಿ ಗಾಯನ ಪ್ರಸ್ತುತಪಡಿಸಿದರು. ಬೆಳಗಾವಿ ವಿಭಾಗದ ಪ್ರಾಚ್ಯವಸ್ತು ಇಲಾಖೆಯ ನಿವೃತ್ತ ಉಪನಿರ್ದೇಶಕಿ ಸುಲೋಚನಾ ಪೋತ್ನೀಸ್ ಕಾರ್ಯಕ್ರಮ ನಿರ್ವಹಿಸಿದರು.

ಡಾ. ಸಿ.ಸಿ. ಹಿರೇಮಠ ವಂದಿಸಿದರು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ಡಾ. ಲಿಂಗರಾಜ ಅಂಗಡಿ, ಬೇಂದ್ರೆ ಸ್ಮಾರಕ ಟ್ರಸ್ಟ್ ಮಾಜಿ ಅಧ್ಯ ಡಾ. ಶ್ಯಾಮಸುಂದರ ಬಿದರಕುಂದಿ, ಉಮೇಶ ಬಳಿಗಾರ, ಬೇಂದ್ರೆ ಪ್ರತಿಷ್ಠಾನದ ಸಂಚಾಲಕರಾದ ಪುನರ್ವಸು ಬೇಂದ್ರೆ, ಸುಮಿತ್ರಾ ಪೋತ್ನೀಸ್ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net